ರಾಗಿ ನೋಂದಣಿ ಕೇಂದ್ರದಲ್ಲಿ ಹೇಳೋರಿಲ್ಲ, ಕೇಳೋರಿಲ್ಲ… ಹೆಸರು ನೋಂದಣಿಗಾಗಿ ರೈತರ ಅಲೆದಾಟ

ಹುಳಿಯಾರು, ಜ. ೯- ಸರ್ಕಾರ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಸುವ ಸಲುವಾಗಿ ಹುಳಿಯಾರು ಎಪಿಎಂಸಿಯಲ್ಲಿ ತೆರೆಯಲಾಗಿದ್ದ ಕಚೇರಿ ಬೀಗ ಜಡಿದು ವಾರಗಳಾಗಿದ್ದು, ಹೆಸರು ನೋಂದಣಿಗೆ ಬರುವ ರೈತರಿಗೆ ಹೇಳೋರಿಲ್ಲ, ಕೇಳೋರಿಲ್ಲ ಎನ್ನುವಂತಾಗಿದ್ದು, ಪ್ರತಿನಿತ್ಯ ರೈತರು ಅಲೆಯುವುದು ಮಾತ್ರ ತಪ್ಪಿಲ್ಲ.
ಮಾರುಕಟ್ಟೆಯಲ್ಲಿ ರಾಗಿ ಬೆಲೆ ಕುಸಿತವಾಗಿರುವ ಹಿನ್ನೆಲೆಯಲ್ಲಿ ರೈತರ ನೆರವಿಗಾಗಿ ಧಾವಿಸಿರುವ ಸರ್ಕಾರ ಕ್ವಿಂಟಾಲ್ ರಾಗಿಗೆ ೩೨೯೫ ರೂ. ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಸಲು ನಿರ್ಧರಿಸಿತ್ತು. ಪರಿಣಾಮ ಹುಳಿಯಾರು ಎಪಿಎಂಸಿಯಲ್ಲಿ ರೈತರ ನೋಂದಣಿಗಾಗಿ ಕಚೇರಿಯನ್ನೂ ತೆರೆದು ನೋಂದಣಿಗೆ ಸಿಬ್ಬಂದಿಯನ್ನೂ ಸಹ ನೇಮಿಸಿತ್ತು. ಆದರೆ ಡಿ. ೨೮ ರಿಂದ ನೋಂದಣಿ ಪ್ರಕ್ರಿಯೆ ಆರಂಭಿಸುವುದಾಗಿ ಹೇಳಿದ್ದ ಜಿಲ್ಲಾಡಳಿತ ವಾರ ಕಳೆದರೂ ಹುಳಿಯಾರಿನಲ್ಲಿ ಮಾತ್ರ ಇನ್ನೂ ನೋಂದಣಿ ಪ್ರಕ್ರಿಯೆ ಆರಂಭಿಸಿಲ್ಲ.
ಜಿಲ್ಲಾಡಳಿತ ಮಾತು ನಂಬಿ ನೋಂದಣಿಗಾಗಿ ಕಳೆದ ವಾರ ಆಗಮಿಸಿದ್ದ ರೈತರಿಗೆ ಸೋಮವಾರದಿಂದ ನೋಂದಣಿ ಮಾಡಿಕೊಳ್ಳುವುದಾಗಿ ಹೇಳಿದ್ದ ಇಲ್ಲಿನ ಸಿಬ್ಬಂದಿ ಏಕಾಏಕಿ ಕಳೆದ ಶುಕ್ರವಾರ ಕಚೇರಿಗೆ ಬೀಗ ಜಡಿದು ಹೋದವರು ಇತ್ತ ತಿರುಗಿಯೂ ಸಹ ನೋಡಿಲ್ಲ. ಪರಿಣಾಮ ಹೆಸರು ನೊಂದಾಯಿಸಲು ಬರುವ ರೈತರಿಗೆ ಹೇಳೋರಿಲ್ಲ, ಕೇಳೋರಿಲ್ಲ ಎನ್ನುವಂತ್ತಾಗಿದ್ದು, ಎಪಿಎಂಸಿ ಸಿಬ್ಬಂದಿಗಳ ಕಡೆ ಮುಖ ಮಾಡುವಂತಾಗಿದೆ.
ಪ್ರತಿನಿತ್ಯ ಹೆಸರು ನೋಂದಾಯಿಸಲು ಆಗಮಿಸುವ ನೂರಕ್ಕೂ ಹೆಚ್ಚು ರೈತರು ಎಪಿಎಂಸಿ ಸಿಬ್ಬಂದಿಗಳನ್ನೇ ಹೆಸರು ನೋಂದಾಯಿಸಿಕೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ.
ಸರಿಯಾದ ಸಾರಿಗೆ ವ್ಯವಸ್ಥೆಯಿಲ್ಲದ ಹಳ್ಳಿಗಳಿಂದ ನಿತ್ಯವೂ ಬಂದೋಗುವುದು ಕಷ್ಟವಾಗುತ್ತಿದ್ದು, ತಂದಿರುವ ದಾಖಲಾತಿಗಳನ್ನು ಪಡೆದು ಹೆಸರು ನೋಂದಾಯಿಸಿ ಅಥವಾ ಟೋಕನ್ ಆದರೂ ಕೊಡಿ ಎಂದು ಪೀಡಿಸುತ್ತಿದ್ದಾರೆ. ರೈತರ ಕಿರಿಕಿರಿ ತಾಳಲಾರದೆ ಪ್ರವೇಶ ದ್ವಾರದಲ್ಲಿ ರಾಗಿ ಖರೀದಿ ಕೇಂದ್ರದವರ ಫೋನ್ ನಂಬರ್ ಅಂಟಿಸಿ ಕರೆ ಮಾಡಿ ಮಾಹಿತಿ ಪಡೆಯಿರಿ ಎನ್ನುತ್ತಿದ್ದಾರೆ.
ಒಟ್ಟಾರೆ ಪ್ರತಿನಿತ್ಯ ಎಪಿಎಂಸಿಗೆ ಹೆಸರು ನೋಂದಣಿಗೆ ಬರುವ ರೈತರಿಗೆ ನೋಂದಣಿ ಪ್ರಕ್ರಿಯೆ ಆರಂಭದ ಸ್ಪಷ್ಟ ಮಾಹಿತಿ ತಿಳಿಯದೆ ಗೊಂದಲದಲ್ಲಿ ಸಿಲುಕಿದ್ದಾರೆ. ಇದರಿಂದಾಗಿ ರೈತರು ನಿತ್ಯ ಎಪಿಎಂಸಿಗೆ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲಾಡಳಿತ ತಕ್ಷಣ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ನಿಖರವಾಗಿ ಎಂದಿನಿಂದ ನೋಂದಣಿ ಪ್ರಕ್ರಿಯೆ ಆರಂಭವಾಗುತ್ತದೆ. ಎಂದಿನಿಂದ ಖರೀದಿ ಪ್ರಕ್ರಿಯೆ ಆರಂಭವಾಗುತ್ತದೆ ಎನ್ನುವ ಮಾಹಿತಿ ನೀಡಿ ರೈತರು ಅಲೆಯುವುದನ್ನು ತಪ್ಪಿಸಬೇಕಿದೆ.
ಈ ಹಿಂದೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಂಡಳಿ ಖರೀದಿ ಗುತ್ತಿಗೆ ಪಡೆದಿತ್ತು. ಈಗ ಆಹಾರ ನಿಗಮದವರಿಗೆ ಬದಲಾಗಿರುವುದರಿಂದ ನೋಂದಣಿ ಪ್ರಕ್ರಿಯೆ ಆರಂಭಕ್ಕೆ ವಿಘ್ನವಾಗಿದೆ. ರೈತರ ಹೆಸರು ನೋಂದಣಿಯ ಜತೆಗೆ ಖರೀದಿಗೆ ಅಗತ್ಯವಾದ ಸಿಬ್ಬಂದಿ ಸೇರಿದಂತೆ ಪರಿಕರಗಳ ಜೋಡಣೆ ತಡವಾಗುತ್ತಿದೆ. ಬಹುಶಃ ಸಂಕ್ರಾಂತಿಯ ಆಸುಪಾಸಿನಲ್ಲಿ ನೋಂದಣಿ ಪ್ರಕ್ರಿಯೆ ಆರಂಭವಾಗಬಹುದು. ಅಲ್ಲಿಯವರೆವಿಗೆ ರೈತರು ಅನಗತ್ಯವಾಗಿ ಎಪಿಎಂಸಿಗೆ ಬಂದೋಗುವುದು ಬೇಡ ಎನ್ನುತ್ತಾರೆ ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಶಿವಶಂಕರ್.
ರಾಗಿ ಕೊಯ್ಲು ಆರಂಭವಾದ ತಕ್ಷಣ ಸರ್ಕಾರ ಖರೀದಿ ಕೇಂದ್ರ ತೆರೆಯಬೇಕು. ಆದರೆ ಆರ್ಥಿಕ ಮುಗ್ಗಟ್ಟಿನಿಂದಾಗಿ ಕಡಿಮೆ ಬೆಲೆಗೆ ರೈತರು ವರ್ತಕರಿಗೆ ರಾಗಿ ಮಾರಿದ ನಂತರದಲ್ಲಿ ವರ್ತಕರ ಹಿತಕ್ಕಾಗಿ ಖರೀದಿ ಕೇಂದ್ರ ತೆರೆಯುತ್ತಾರೆ. ಹಾಗಾಗಿಯೇ ರಾಗಿ ಖರೀದಿ ಮಾಡುವುದಿರಲಿ ಹೆಸರು ನೋಂದಾಯಿಸಿಕೊಳ್ಳಲು ಮೀನಾಮೇಷ ನೋಡುತ್ತಿದ್ದಾರೆ. ಜಿಲ್ಲಾಡಳಿತಕ್ಕೆ ರೈತರ ಬಗ್ಗೆ ಕನಿಷ್ಠ ಕಾಳಜಿಯಿದ್ದರೆ ತಕ್ಷಣ ರಾಗಿ ಖರೀದಿಯನ್ನೇ ಆರಂಭಿಸಬೇಕು ಎಂದು ರೈತ ಸಂಘದ ಹೊಸಹಳ್ಳಿ ಚಂದ್ರಣ್ಣ ಒತ್ತಾಯಿಸಿದ್ದಾರೆ.