ರಾಗಿ ದೋಸೆ ಮಾಡುವ ವಿಧಾನ

ಬೇಕಾಗುವ ಸಾಮಾಗ್ರಿಗಳು
ರಾಗಿ ಹುಡಿ – ೧ ಕಪ್
ಉದ್ದಿನ ಬೇಳೆ – ಕಾಲು ಕಪ್
ಮೆಂತೆ – ಅರ್ಧ ಸ್ಪೂನ್
ಉಪ್ಪು ರುಚಿಗೆ ತಕ್ಕಷ್ಟು
ಅಡುಗೆ ಸೋಡಾ ಸ್ವಲ್ಪ (ಆಯ್ಕೆಯದ್ದು)
ಎಣ್ಣೆ- ಸ್ವಲ್ಪ
ಮಾಡುವ ವಿಧಾನ:
ಮೊದಲಿಗೆ ಉದ್ದಿನ ಬೇಳೆ ಮತ್ತು ಮೆಂತೆಯನ್ನು ತೊಳೆದಿಟ್ಟುಕೊಳ್ಳಿ. ಇದನ್ನು ೫-೬ ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ತದನಂತರ ಉದ್ದು ಮತ್ತು ಮೆಂತೆಯನ್ನು ನುಣ್ಣಗೆ ರುಬ್ಬಿಕೊಳ್ಳಿ ಇದನ್ನು ಪಾತ್ರೆಗೆ ವರ್ಗಾಯಿಸಿಕೊಳ್ಳಿ.
ಇದಕ್ಕೆ ರಾಗಿ ಹುಡಿಯನ್ನು ಸೇರಿಸಿ. ಸ್ವಲ್ಪ ನೀರು ಹಾಕಿಕೊಂಡು ಹಿಟ್ಟನ್ನು ದೋಸೆ ಹಿಟ್ಟಿನ ಹದಕ್ಕೆ ಬೆರೆಸಿಕೊಳ್ಳಿ. ನಂತರ ಈ ಹಿಟ್ಟನ್ನು ಹುಳಿ ಬರಿಸುವುದಕ್ಕಾಗಿ ೮-೧೦ ಗಂಟೆಗಳ ಕಾಲ ಮುಚ್ಚಿಡಿ, ಹಿಟ್ಟು ಹುದುಗು ಬರುವುದು ಗೊತ್ತಾಗುತ್ತದೆ. ಹಿಟ್ಟಿಗೆ ಸ್ವಲ್ಪ ಸೋಡಾ ಸೇರಿಸಿ ಮತ್ತು ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ. ಹಿಟ್ಟು ತುಂಬಾ ದಪ್ಪವಾಗಿದ್ದರೆ, ಸ್ವಲ್ಪ ನೀರು ಸೇರಿಸಿ. ನಿಮ್ಮ ರಾಗಿ ಹಿಟ್ಟು ಈಗ ಸಿದ್ಧವಾಗಿದೆ. ಇಡ್ಲಿ ಹಿಟ್ಟಿಗಿಂತ ಸ್ವಲ್ಪ ತೆಳುವಾಗಿ ನಿಮ್ಮ ರಾಗಿ ಹಿಟ್ಟು ಇದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಇನ್ನು ತವಾ ಬಿಸಿ ಮಾಡಿ ಸ್ವಲ್ಪ ಎಣ್ಣೆಯನ್ನು ತವಾಗೆ ಹಾಕಿ. ಬಿಸಿಯಾದ ತವಾದ ಮೇಲೆ ಒಂದು ಸ್ಪೂನ್‌ನಷ್ಟು ಹಿಟ್ಟನ್ನು ತೆಗೆದುಕೊಂಡು ಹುಯ್ಯಿರಿ. ಪೂರ್ತಿಯಾಗಿ ತವಾದ ಉದ್ದಕ್ಕೂ ಹಿಟ್ಟನ್ನು ಹರಡಿಸಿ. ಸ್ವಲ್ಪ ಎಣ್ಣೆ ಹಾಕಿ ದೋಸೆಯನ್ನು ಎರಡೂ ಬದಿ ಕಾಯಿಸಿ.