ರಾಗಿ ಖರೀದಿ ನೋಂದಣಿ ಟೋಕನ್ ವ್ಯವಸ್ಥೆಗೆ ಸೂಚನೆ

ದೇವನಹಳ್ಳಿ, ಡಿ. ೧೮-ರೈತರಿಂದ ಖರೀದಿಗೆ ನೋಂದಣಿ ಮಾಡಿಸಿಕೊಳ್ಳುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಸುವ ಮೂಲಕ ಕಡ್ಡಾಯವಾಗಿ ಕೋವಿಡ್-೧೯ ನಿಯಮ ಪಾಲಿಸಲು, ಟೋಕನ್ ವ್ಯವಸ್ಥೆ ಮಾಡಿ, ನೂಕುನುಗ್ಗಲನ್ನ ತಪ್ಪಿಸುವಂತೆ
ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ಸೂಚಿಸಿದರು.
ದೇವನಹಳ್ಳಿ ತಾಲ್ಲೂಕು, ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ನಡೆದ ರಾಗಿ ಖರೀದಿ ಕೇಂದ್ರ, ಶೇಖರಣೆಗೆ ಅಗತ್ಯ ಗೋದಾಮು ಮತ್ತು ಮುಂಜಾಗ್ರತಾ ಕ್ರಮಗಳ ಟಾಸ್ಕ್‌ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನೋಂದಣಿ ಜೊತೆಗೆ ಉಗ್ರಾಣಗಳ ಸ್ವಚ್ಚತಾ ಕಾರ್ಯಗಳು ನಡೆಸಲು ತಿಳಿಸಿದರಲ್ಲದೆ, ಕೃಷಿ ಇಲಾಖೆ ಮತ್ತು ಮಾರ್ಕೆಟ್ ಫೆಡರೇಷನ್ ಸಹಯೋಗದಲ್ಲಿ ಈ ಕುರಿತು ವ್ಯಾಪಕ ಪ್ರಚಾರ ಕೈಗೊಳ್ಳಲು ತಿಳಿಸಿದರು.
ಕೋವಿಡ್-೧೯ ಹಿನ್ನೆಲೆ ರಾಗಿ ನೋಂದಣಿ ಕೇಂದ್ರಗಳಲ್ಲಿ ನೋಂದಣಿಗಾಗಿ ಹೆಚ್ಚು ಕೌಂಟರ್‌ಗಳನ್ನು ತೆರೆಯುವಂತೆ ತಿಳಿಸಿದರಲ್ಲದೆ, ಬೆಳೆ ಸಮೀಕ್ಷೆ ಸಂದರ್ಭದಲ್ಲಿ ನಮೂದಿಸಲಾಗದ ಪಹಣಿ ಸಂಖ್ಯೆಯಲ್ಲಿ ರಾಗಿ ಬೆಳೆದಿದ್ದಲ್ಲಿ, ಅಂತಹ ಸಮಸ್ಯೆಗಳನ್ನು ಬಗೆಹರಿಸಲು ಹೆಲ್ಪ್‌ಡೆಸ್ಕ್ ನಂತಹ ಪ್ರತ್ಯೇಕ ಕೌಂಟರ್ ವ್ಯವಸ್ಥೆ ಇರಬೇಕೆಂದು ತಿಳಿಸಿದರು.
ಎಪಿಎಂಸಿ ವತಿಯಿಂದ ನೋಂದಣಿ ಮತ್ತು ಗುಣಮಟ್ಟ ಪರಿಶೀಲನೆ ಮಾಡಬೇಕು ಎಂದರಲ್ಲದೆ, ರೈತನೊಬ್ಬ ಒಂದು ಎಕರೆವೊಂದಕ್ಕೆ ಹತ್ತು ಕ್ವಿಂಟಲ್, ಐದು ಎಕರೆಗೆ ಐವತ್ತು ಕ್ವಿಂಟಲ್ ರಾಗಿ ಕೊಡಬಹುದು. ಆದರೆ ನೋಂದಣಿ ಮಾಡಿಸಿದ ನಂತರವೇ ರಾಗಿ ತರಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಡಾ.ಜಗದೀಶ್.ಕೆ.ನಾಯಕ ಅವರು ಮಾತನಾಡಿ ರಾಗಿ ನೋಂದಣಿ ಕೇಂದ್ರದಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಕುಡಿಯುವ ನೀರಿನ ವ್ಯವಸ್ಥೆ, ಕ್ಯಾಂಟೀನ್ ಸೌಲಭ್ಯ ಒದಗಿಸಲು ತಿಳಿಸಿದರಲ್ಲದೆ, ದಲ್ಲಾಳಿಗಳ ಹಾವಳಿ ತಪ್ಪಿಸಿ ಎಂದು ತಿಳಿಸಿದರು.
ಸಭೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕಿ ಗಿರಿಜಾದೇವಿ, ಕೃಷಿ ಇಲಾಖೆ ಅಧಿಕಾರಿ, ದೊಡ್ಡಬಳ್ಳಾಪುರ ಡಿವೈಎಸ್ಪಿ ರಂಗಪ್ಪ.ಟಿ, ಮಾರ್ಕೆಟಿಂಗ್ ಫೆಡರೇಷನ್ ಅಧಿಕಾರಿ ಹಾಗೂ ಮತ್ತಿತರರು ಇದ್ದರು.