ರಾಗಿ ಖರೀದಿ ಕೇಂದ್ರ ಕೊಟ್ಟೂರಲ್ಲಿ ಆರಂಭ

ಕೊಟ್ಟೂರು, ಡಿ.22: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ರಾಗಿ ಖರೀದಿಸುವಂತೆ ಸರ್ಕಾರ ಆದೇಶಿಸಿದ್ದು, ತಾಲೂಕು ಕೇಂದ್ರ ಕೊಟ್ಟೂರಿನಲ್ಲಿ
ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ರೈತಸಂಪರ್ಕಕೇಂದ್ರದ ಅಧಿಕಾರಿ ಸ್ಯಾಮಸುಂದರ್ ಹೇಳಿದರು.
ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತ ಸಂಸ್ಥೆಯನ್ನು ಖರೀದಿ ಏಜೆನ್ಸಿಯಾಗಿ ನಿಯೋಜಿಸಲಾಗಿದೆ. ಪ್ರತಿ ಕ್ವಿಂಟಾಲ್ ರಾಗಿಗೆ 3,295 ಬೆಂಬಲ ಬೆಲೆ ನಿಗದಿಯಾಗಿದೆ. ರೈತರಿಂದ ಉತ್ಪಾದನೆಗೆ ಅನುಗುಣವಾಗಿ ಪ್ರತಿ ಎಕರೆಗೆ 10 ಕ್ವಿಂಟಾಲ್‌ನಂತೆ ಗರಿಷ್ಠ 50 ಕ್ವಿಂಟಾಲ್ ಖರೀದಿಸಲಾಗುವುದು ಎಂದು ಹೇಳಿದ್ದಾರೆ.
ತಾಲ್ಲೂಕಿನಲ್ಲಿ ನೋಂದಣಿ ಕೇಂದ್ರಗಳನ್ನು ತೆರೆಯಲಾಗಿದೆ. ಆಸಕ್ತ ರೈತರು ನೋಂದಣಿ ಕೇಂದ್ರಗಳಲ್ಲಿ 2021ರ ಜ.31ರೊಳಗೆ ಹೆಸರು ನೋಂದಣಿ ಮಾಡಿಸಬೇಕು. ನೋಂದಣಿಯಾದ ರೈತರಿಂದ 2021ರ ಮಾರ್ಚ್ 15ರವರೆಗೆ ರಾಗಿ ಖರೀದಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ರೈತರು ನೋಂದಣಿ ಮಾಡಿಸಿಕೊಂಡ ನಂತರ ರಾಗಿ ಖರೀದಿ ಕೇಂದ್ರಕ್ಕೆ ತಂದ ರಾಗಿಯನ್ನು ಕೃಷಿ ಇಲಾಖೆಯಿಂದ ನೇಮಿಸಿದ ಗ್ರೇಡರ್‌ಗಳಿಂದ ಪರೀಕ್ಷೆ ಮಾಡಿಸಲಾಗುತ್ತದೆ. ಗುಣಮಟ್ಟದ ಪ್ರಮಾಣಪತ್ರ ಪಡೆದ ರಾಗಿಯನ್ನು ಖರೀದಿಸಲಾಗುವುದು. ಆ ನಂತರ ಆನ್‌ಲೈನ್‌ ಮೂಲಕ ರೈತರ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.