ರಾಗಿಹಣ ಪಾವತಿಗಾಗಿ ಆಗ್ರಹಿಸಿ ಅಡುಗೆ ತಯಾರಿಸಿ ಆಹಾರಸೇವಿಸಿ ಅಹೋರಾತ್ರಿ ಧರಣಿ

ಸಂಜೆವಾಣಿ ವಾರ್ತೆ

ಜಗಳೂರು.ಜ.22: ಪಟ್ಟಣದ ಎಪಿಎಂಸಿ ಆವರಣದಲ್ಲಿ ರಾಗಿ ಹಣಪಾವತಿಗಾಗಿ ಒತ್ತಾಯಿಸಿ ಫಲಾನುಭವಿ ರೈತರು ಸ್ಥಳದಲ್ಲಿಯೇ ಸೌದೆ ಒಲೆಯಲ್ಲಿ ಅಡುಗೆ ತಯಾರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.ರೈತ ಸಂಘಟನೆ ತಾಲೂಕು ಅಧ್ಯಕ್ಷ ಆಕನೂರು ನಿಂಗಪ್ಪ ಮಾತನಾಡಿ,ಕಳೆದ ವರ್ಷದಲ್ಲಿ ರಾಗಿ ಖರೀದಿಕೇಂದ್ರದಲ್ಲಿ ನಡೆದ ಅವ್ಯವಹಾರದಿಂದ ಹಣಪಾವತಿಯಿಂದ ವಂಚಿತರಾಗಿರುವ ರಾಗಿಬೆಳೆಗಾರರಿಗೆ ಹಂತಹಂತವಾಗಿ ಹಣಪಾವತಿಸಲು ಸರ್ಕಾರ ಕ್ರಮಕೈಗೊಳ್ಳಲಾಗಿತ್ತು.ಆಹಾರ‌ ನಿಗಮದ ಅಧಿಕಾರಿಗಳು ನೋಟಿಸ್ ಗೆ ಸ್ಪಂದಿಸಿ ತಾಂತ್ರಿಕ ದೋಷ ಸರಿಪಡಿಸಿ ವಾರದೊಳಗೆ ಹಣಪಾವತಿಸಲು ಒಪ್ಪಿಕೊಂಡಿದ್ದರು .ಆದರೆ ಇದುವರೆಗೂ 500 ಕ್ಕೂ ಅಧಿಕ ರೈತರಿಗೆ ಯಾವುದೇ ಬಿಡಿಗಾಸು ಹಣ ಪಾವತಿಯಾಗಿಲ್ಲ ಎಂದು ಆಗ್ರಹಿಸಿದರು.ರೈತ ಸಂಘಟನೆ ಮುಖಂಡ ಮಾರುತಿ ಮಾತನಾಡಿ,ತಾಲೂಕು ಪ್ರಸಕ್ತಸಾಲಿನಲ್ಲಿ ಬರಛಾಯೆಗೆ ಸಿಲುಕಿ ಯಾವುದೇ ಬೆಳೆಗಳು ಕೈಗೆ ಸಿಗದೆ ಕಂಗಾಲಾಗಿರುವ ರೈತರಿಗೆ ಕಳೆದ ವರ್ಷದ ರಾಗಿ ಹಣವೂ ಇಲ್ಲದೆ ಗಾಯದಮೇಲೆ ಬರೆ ಎಳೆದಂತಾಗಿ ಆರ್ಥಿಕ ಸಂಕಷ್ಟ ಎದುರಾಗಿದೆ.ಹಣಪಾವತಿಮಾಡುವವರೆಗೂ ಅನಿರ್ದಿಷ್ಠಾವಧಿ ಸ್ಥಳದಲ್ಲಿಯೇ ಅಡುಗೆತಯಾರಿಸಿಕೊಂಡು ಊಟ,ತಿಂಡಿ ಸೇವಿಸುವ ಮೂಲಕ ಅಹೋರಾತ್ರಿ ಧರಣಿ ನಡೆಸಲಾಗುತ್ತಿದೆ ಎಂದು ತಿಳಿಸಿದರು. ರೈತರ ಪ್ರತಿಭಟನೆ ಕುರಿತು ಆಹಾರ ನಿಗಮದ ಜಿಲ್ಲಾ ವ್ಯವಸ್ಥಾಪಕ‌ನಿರ್ದೇಶಕರ ಗಮನಕ್ಕೆ ತರಲಾಗಿದ್ದು.ಸ್ಥಳಕ್ಕೆ ಆಗಮಿಸಿ ಸಮಸ್ಯೆಗೆ ಪರಿಹರಿಸಲು ಸೂಚಿಸಲಾಗಿದೆ ಎಂದು ತಹಶೀಲ್ದಾರ್ ಸಯ್ಯದ್ ಕಲೀಂ ಉಲ್ಲಾ ಪತ್ರಿಕೆಗೆ ಪ್ರತಿಕ್ರಿಯೆ ನೀಡಿದರು.ಈ ಸಂದರ್ಭದಲ್ಲಿ ರಾಗಿ ಬೆಳೆಗಾರರಾದ ಸಿದ್ದಪ್ಪ,ಮಾದಿಹಳ್ಳಿ ಪರಮೇಶ್ವರಪ್ಪ,ಶರಣಪ್ಪ,ಮರಿಕುಂಟೆಮಹೇಶ್,ಬಾಬು,ಉರ್ಲುಕಟ್ಟೆ ರೇವಣ್ಣ,ರಸ್ತೆಮಾಚಿಕೆರೆ ಸ್ವಾಮಿ,ಅಜ್ಜಣ್ಣ,ಸೇರಿದಂತೆ ಇದ್ದರು.