ರಾಗಿಣಿ, ಸಂಜನಾ ವಿರುದ್ಧ ಇಡಿ ಕೇಸ್

ಬೆಂಗಳೂರು,ಸೆ.೧೨- ಡ್ರಗ್ ಜಾಲದಲ್ಲಿ ಬಂಧಿತರಾಗಿರುವ ನಟಿಯರಾದ ರಾಗಿಣಿ ಹಾಗೂ ಸಂಜನಾ ಅವರ ತೀವ್ರ ವಿಚಾರಣೆ ನಡೆಸಿರುವ ಸಿಸಿಬಿ ಪೊಲೀಸರು ಅವರ ಮೊಬೈಲ್ ಗಳ ರಹಸ್ಯ ಬೇದಿಸಲು ಮುಂದಾಗಿದ್ದಾರೆ.
ರಾಗಿಣಿ ಹಾಗೂ ಸಂಜನಾ ತಲಾ ಮೂರು ಮೊಬೈಲ್ ಗಳನ್ನು ಬಳಸುತ್ತಿದ್ದು ಅವುಗಳಿಂದ ಬೇರೆಯವರಿಗೆ ಹೋಗಿರುವ ಕಾಲ್ ಗಳು ವಾಟ್ಸಾಪ್ ನ ವಿವರಗಳನ್ನು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಲು ಮುಂದಾಗಿದ್ದಾರೆ.
ನಟಿ ರಾಗಿಣಿಯ ಎರಡು ಮೊಬೈಲ್ ಪೋನ್‌ಗಳು, ರವಿಶಂಕರ್ ಮೊಬೈಲ್ ಪೋನ್‌ಗಳು, ಲೂಪ್ ಪೆಪ್ಪರ್ ಬಳಸುತ್ತಿದ್ದ ಮೊಬೈಲ್, ಪ್ರಶಾಂತ್ ರಂಕಾ ಬಳಸುತ್ತಿದ್ದ ಮೊಬೈಲ್‌ಗಳಲ್ಲಿದ್ದ ಎಲ್ಲಾ ಡಾಟಾ ರಿಟ್ರೀವ್ ಆಗಿದ್ದು ಅದರ ತನಿಖೆ ಕೈಗೊಂಡಿದ್ದಾರೆ.
ಈ ನಡುವೆ ಭಾರೀ ಪ್ರಮಾಣದ ಬೇನಾಮಿ ವಹಿವಾಟು ನಡೆದಿರಬಹುದೆಂಬ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ(ಇ.ಡಿ) ಇಬ್ಬರು ನಟಿಯರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದೆ.
ಸಿಸಿಬಿ ಬಂಧನದಲ್ಲಿರುವ ಈ ಇಬ್ಬರ ನಟಿಯರು ಇ.ಡಿ ಅಧಿಕಾರಿಗಳುಎಫ್‌ಐಆರ್ ದಾಖಲಿಸಿರುವುದರಿಂದ ಮತ್ತೊಂದು ಸಂಕಷ್ಟ ಎದುರಿಸುವಂತಾಗಿದೆ.
ಕರ್ನಾಟಕ-ಗೋವಾ ವಿಭಾಗದ ಜಾರಿ ನಿರ್ದೇಶನಾಲಯದ ಹಿರಿಯ ಅಧಿಕಾರಿಯೊಬ್ಬರು ರಾಗಿಣಿ ಮತ್ತು ಸಂಜನಾ ವಿರುದ್ಧ ಎಫ್‌ಐಆರ್ ದಾಖಲಿಸಿರುವುದನ್ನು ಖಚಿತಪಡಿಸಿದ್ದಾರೆ.
ಪ್ರಸ್ತುತ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಅಧಿಕಾರಿಗಳು ನೀಡಿರುವ ಪ್ರಾಥಮಿಕ ವರದಿಯಲ್ಲಿ ದೇಶ-ವಿದೇಶಗಳಿಂದ ಭಾರೀ ಪ್ರಮಾಣದ ಬೇನಾಮಿ ವಹಿವಾಟು ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಹೀಗಾಗಿ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದೇವೆ ಎಂದು ತಿಳಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಶ್ರೀಲಂಕಾ ಹಾಗೂ ಆಫ್ರಿಕಾ ದೇಶಗಳಿಂದಲೂ ಕರ್ನಾಟಕ ಸೇರಿದಂತೆ ಬೇರೆ ಬೇರೆ ಭಾಗಗಳಿಗೆ ಮಾದಕವಸ್ತುಗಳನ್ನು ಖರೀದಿಸಿ ಸರಬರಾಜು ಮಾಡಿದ್ದಾರೆ. ಕೋಟ್ಯಂತರ ರೂ. ವಹಿವಾಟು ನಡೆದಿರುವುದು ಕಂಡುಬಂದಿರುವ ಕಾರಣ ಸ್ವಯಂಪ್ರೇರಿತರಾಗಿ ನಾವೇ ದೂರು ದಾಖಲಿಸಿದ್ದೇವೆ. ದೊಡ್ಡ ಮಟ್ಟದಲ್ಲಿ ಹಣದ ವಹಿವಾಟು ನಡೆದಿರುವುದು ಕಂಡುಬಂದಿದೆ ಎಂದು ಹೇಳಿದ್ದಾರೆ.
ಸಿಸಿಬಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ತನಿಖಾ ವರದಿ ಆಧಾರದ ಮೇಲೆ ನಾವು ಮುಂದಿನ ಕ್ರಮಗಳನ್ನು ಕೈಗೊಳ್ಳುತ್ತೇವೆ. ತನಿಖೆ ಪ್ರಗತಿಯಲ್ಲಿರುವುದರಿಂದ ಈ ಬಗ್ಗೆ ಹೆಚ್ಚಿನ ವಿವರ ನೀಡಲು ಸಾಧ್ಯವಿಲ್ಲ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಇ.ಡಿ ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ ಸಿಸಿಬಿ ಅವರಿಂದ ಮಂಗಳೂರಿನ ಇ.ಡಿ ವಿಭಾಗದ ಅಧಿಕಾರಿಯೊಬ್ಬರು ಮಾಹಿತಿಯನ್ನು ಪಡೆದಿದ್ದಾರೆ.
ಬಂಧನಕ್ಕೊಳಪಟ್ಟಿರುವ ವೀರೇಶ್ ಖನ್ನಾ, ಅಹಮ್ಮದ್, ರವಿಶಂಕರ್, ರಾಹುಲ್, ನಿನ್ನೆಯಷ್ಟೇ ಬಂಧನಕ್ಕೊಳಗಾದ ಪ್ರತೀಕ್ ಶೆಟ್ಟಿ, ಹರಿಯಾಣದ ಅಗರ್‍ವಾಲ್, ಮಾಜಿ ಸಚಿವರ ಪುತ್ರ ಹಾಗೂ ಬಿಬಿಎಂಪಿ ಸದಸ್ಯರ ಮಗ ಸೇರಿದಂತೆ ಅನೇಕರು ಬೇನಾಮಿ ವಹಿವಾಟು ನಡೆಸಿರುವುದು ಬ್ಯಾಂಕ್ ವಹಿವಾಟಿನಿಂದ ಬಹಿರಂಗವಾಗಿದೆ ಎಂದು ಮೂಲಗಳು ತಿಳಿಸಿವೆ.

ದಾಳಿ ಸಾಧ್ಯತೆ: ಇ.ಡಿ ಅಧಿಕಾರಿಗಳು ರಾಗಿಣಿ ಮತ್ತು ಸಂಜನಾ ವಿರುದ್ಧ ಎಫ್‌ಐಆರ್ ದಾಖಲಿಸಿರುವ ಹಿನ್ನೆಲೆ ಯಾವುದೇ ಸಂದರ್ಭದಲ್ಲೂ ಇ.ಡಿ ಅಧಿಕಾರಿಗಳು ಅವರ ಮನೆ, ಕಚೇರಿ, ಸಂಬಂಧಿಕರು ಸೇರಿದಂತೆ ಮತ್ತಿತರ ಮೇಲೆ ದಾಳಿ ನಡೆಸುವ ಸಾಧ್ಯತೆ ನಿಚ್ಚಳವಾಗಿದೆ. ಕೋಟ್ಯಂತರ ರೂ. ವಹಿವಾಟು ನಡೆದಿದೆ ಎಂಬ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರಮುಖ ದಾಖಲೆಗಳ ಶೋಧಕ್ಕಾಗಿ ಇ.ಡಿ ಅಧಿಕಾರಿಗಳು ದಾಳಿ ನಡೆಸಬಹುದು. ಇನ್ನು ಸಿಸಿಬಿ ವಶದಲ್ಲಿರುವ ಡ್ರಗ್ ಜಾಲದ ಪ್ರಮುಖ ಕಿಂಗ್‌ಪಿನ್ ವಿರೇಶ್ ಖನ್ನಾ, ರಾಹುಲ್, ಪ್ರಶಾಂತ್ ರಂಕಾ, ಪ್ರತೀಕ್ ಶೆಟ್ಟಿ ಸೇರಿದಂತೆ ಮತ್ತಿತರರನ್ನು ತಮ್ಮ ವಶಕ್ಕೆ ನೀಡುವಂತೆ ಇ.ಡಿ ಅವರು ಬಾಡಿ ವಾರಂಟ್ ನೀಡಲಿದ್ದಾರೆ. ಸ್ಯಾಂಡಲ್‌ವುಡ್ ಡ್ರಗ್ಸ್ ಜಾಲದ ನಂಟು ಪ್ರಕರಣದಲ್ಲಿ ಸಿಸಿಬಿಯಿಂದ ಬಂಧನಕ್ಕೊಳಗಾಗಿರುವ ಆರೋಪಿಗಳ ವಿರುದ್ಧ ಪ್ರಬಲ ಸಾಕ್ಷ್ಯಾಧಾರಗಳನ್ನು ಕಲೆ ಹಾಕಲಾಗಿದೆ.