ರಾಗಿಣಿ-ಸಂಜನಾಗೆ ಮತ್ತೆ ಸಂಕಷ್ಟ

ಬೆಂಗಳೂರು,ಆ.೨೪-ಮಾದಕ ವಸ್ತು ಸೇವನೆ ಸರಬರಾಜು ಜಾಲದಲ್ಲಿ ಸಿಲುಕಿ ಜೈಲು ಸೇರಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ನಶೆ ರಾಣಿಯರಾದ ರಾಗಿಣಿ-ಸಂಜನಾ ಡ್ರಗ್ಸ್ ಸೇವಿಸಿರುವುದು ವಿಧಿ ವಿಜ್ಞಾನ ಪ್ರಯೋಗಾಲಯ(ಎಫ್‌ಎಸ್‌ಎಲ್) ಪರೀಕ್ಷೆಯಲ್ಲಿ ದೃಢಪಟ್ಟಿದ್ದು ಮತ್ತೆ ಬಂಧನದ ಭೀತಿಗೆ ಸಿಲುಕಿದ್ದಾರೆ.
ನಟಿಯರಾದ ಸಂಜನಾ ಗಲ್ರಾನಿ, ರಾಗಿಣಿ ದ್ವಿವೇದಿ, ಅವರಲ್ಲದೆ ಡ್ರಗ್ಸ್ ಜಾಲದಲ್ಲಿ ಸಿಕ್ಕಿಬಿದ್ದಿದ್ದ ವಿರೇನ್ ಖನ್ನಾ, ರವಿಶಂಕರ್, ಲೂಮ್ ಪೆಪ್ಪರ್, ರಾಹುಲ್ ತೋನ್ಸೆ ಡ್ರಗ್ಸ್ ಸೇವಿಸಿರುವುದು ಪರೀಕ್ಷೆಯಲ್ಲಿ ದೃಡಪಟ್ಟಿದೆ.
ಡ್ರಗ್ಸ್ ಸೇವನೆ ಜಾಲದಲ್ಲಿ ಸಿಲುಕಿ ಬಂಧಿತರಾಗಿದ್ದ ಸಂಜನಾ ಗಲ್ರಾನಿ, ರಾಗಿಣಿ ಅವರ ಮೂತ್ರ ಹಾಗೂ ತಲೆ ಕೂದಲನ್ನು ಕಳೆದ ೨೦೨೦ರ ಅಕ್ಟೋಬರ್‌ನಲ್ಲಿ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಸಂಗ್ರಹಿಸಿ ಮೊದಲ ಬಾರಿ ಕಳುಹಿಸಿದ್ದ ಹೈದರಾಬಾದ್‌ನ ಎಫ್‌ಎಸ್‌ಎಲ್‌ಗೆ ಕೂದಲು ಮಾದರಿ ಕಳುಹಿಸಿದ್ದು ವಾಪಸು ಬಂದಿತ್ತು.
ಅವೈಜ್ಞಾನಿಕ ಎಂದು ವಿಧಿವಿಜ್ಞಾನ ತಜ್ಞರು ಅಭಿಪ್ರಾಯಪಟ್ಟಿದ್ದರಿಂದ ಎರಡನೇ ಬಾರಿ ಮಾದರಿ ಸಂಗ್ರಹಿಸಿ ಕಳುಹಿಸಲಾಗಿತ್ತು ಅದರ ವರದಿಯಲ್ಲಿ ರಾಗಿಣಿ, ಸಂಜನಾ ಹಾಗೂ ಇತರೆ ಕೆಲ ಆರೋಪಿಗಳು ಡ್ರಗ್ಸ್ ಸೇವನೆ ಮಾಡಿರುವುದು ಧೃಢಪಟ್ಟಿದ್ದು ತನಿಖೆಯನ್ನು ಮುಂದುವರಿಸಲಾಗುವುದು ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಅಧ್ಯಯನದಿಂದ ಪತ್ತೆ:
ಸಾಮಾನ್ಯವಾಗಿ ಡ್ರಗ್ಸ್ ಪ್ರಕರಣದಲ್ಲಿ ರಕ್ತ, ಮೂತ್ರ ಸ್ಯಾಂಪಲ್ ಕಳುಹಿಸಲಾಗುತ್ತದೆ. ಅದರಲ್ಲಿ ಡ್ರಗ್ಸ್ ಸೇವಿಸಿ ಒಂದೆರಡು ದಿನ ಆಗಿದ್ದರೆ ಮಾತ್ರ ಪಾಸಿಟಿವ್ ಬರುತ್ತಿತ್ತು. ಕೆಲವು ಪ್ರಕರಣದಲ್ಲಿ ಆರೋಪಿಯನ್ನು ತಡವಾಗಿ ಬಂಧಿಸಿದಾಗ ಡ್ರಗ್ಸ್ ತೆಗೆದುಕೊಂಡಿದ್ದರೂ ಪತ್ತೆ ಮಾಡುವುದು ಕಷ್ಟವಾಗುತ್ತಿತ್ತು.
ಅಧ್ಯಯನವೊಂದರಲ್ಲಿ ತಲೆ ಕೂದಲಿನಲ್ಲಿ ಒಂದು ವರ್ಷದವರೆಗೂ ಡ್ರಗ್ಸ್ ಸ್ಯಾಂಪಲ್ಸ್ ಇರುತ್ತದೆ ಎಂದು ಗೊತ್ತಾದ ಕಾರಣ ಅದನ್ನು ಸದುಪಯೋಗ ಪಡಿಸಿಕೊಳ್ಳಲು ಕಳೆದ ವರ್ಷ ಆರೋಪಿಗಳ ಕೂದಲು ಸ್ಯಾಂಪಲ್ಸ್ ಸಂಗ್ರಹಿಸಿ ಹೈದರಾಬಾದ್?ನ ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿತ್ತು.
ಅದರಲ್ಲಿ ಆರೋಪಿಗಳು ಡ್ರಗ್ಸ್ ಸೇವನೆ ಮಾಡಿದ್ದಾರೆಂಬ ಪಾಸಿಟಿವ್ ರಿಪೋರ್ಟ್ ಬಂದಿದೆ ಎಂದು ತಿಳಿಸಿದ್ದಾರೆ.
ವರದಿಯಲ್ಲಿ ಇಬ್ಬರೂ ನಟಿಯರು ಜತೆಗೆ ವಿರೇನ್ ಖನ್ನಾ, ರವಿಶಂಕರ್, ಲೂಮ್ ಪೆಪ್ಪರ್, ರಾಹುಲ್ ತೋನ್ಸೆ ಕೂಡ ಡ್ರಗ್ಸ್ ಸೇವಿಸಿರುವುದು ಖಚಿತವಾಗಿದೆ.
ಡ್ರಗ್ಸ್ ಸಿಗದಿದ್ದರೂ ಸೆರೆ:
ನಟಿಯರಿಬ್ಬರೂ ಡ್ರಗ್ಸ್ ಸೇವಿಸಿರುವುದು ಖಚಿತವಾದ ನಂತರ ಅಂದು ಡ್ರಗ್ಸ್ ಸಿಗದೇ ನಟಿಯರನ್ನು ಬಂಧಿಸಲಾಗಿದೆ ಎಂದು ಆರೋಪಿಸಿದವರಿಗೆ ಅರಗಿಸಿಕೊಳ್ಳುವುದು ಕಷ್ಟವಾಗಿದೆ.
ಅರೋಪಿಗಳು ಸಿಂಡಿಕೇಟ್ ಆಗಿ ಒಳಸಂಚು ರೂಪಿಸಿ ದಂಧೆ ನಡೆಸುತ್ತಿದ್ದರು ಎನ್ನುವುದನ್ನು ಸಿಸಿಬಿ ಬಯಲಿಗೆಳೆದಿದ್ದರೂ ಹಲವರು ಒಪ್ಪದೇ ಅಪಸ್ವರ ಎತ್ತಿ ಸಂಜನಾ, ರಾಗಿಣಿ ಮನೆಯಲ್ಲಿ ಡ್ರಗ್ಸ್ ದೊರೆತಿದೆಯೇ ಎಂದು ಪ್ರಶ್ನಿಸಿದ್ದು ಅದಕ್ಕೆ ವರದಿ ಉತ್ತರ ನೀಡಿದೆ ಎಂದರು.
ಪಾರ್ಟಿಗಳ ಹಣ ಹಂಚಿಕೆ:
ಡ್ರಗ್ ಪೆಡ್ಲರ್ ವೀರೇನ್ ಖನ್ನಾ ಡ್ರಗ್ಸ್ ತನಿಖೆಯಲ್ಲಿ ಕಿಂಗ್ ಪಿನ್ ಆಗಿರುವುದು ಪತ್ತೆಯಾಗಿದೆ ಆತ ಅಯೋಜಿಸುತ್ತಿದ್ದ ಪಾರ್ಟಿಗಳಲ್ಲಿ ಸೆಲೆಬ್ರೆಟಿಗಳು ಪಾಲ್ಗೊಂಡು ಯುವ ಜನತೆಯನ್ನು ಸೆಳೆಯುತಿದ್ದರು.
ಅಲ್ಲಿ ಭಾಗಿಯಾಗುತಿದ್ದ ಯುವಕ ಯುವತಿಯರಿಗೆ ಡ್ರಗ್ಸ್ ನೀಡುತಿದ್ದರು.
ಈ ರೀತಿಯಲ್ಲಿ ನಗರದ ನಾನಾ ಭಾಗದಲ್ಲಿ ಪಾರ್ಟಿ ನಡೆಸಿ ಡ್ರಗ್ಸ್ ಮಾರಾಟ ಮಾಡಿದ್ದಾರೆ. ಡ್ರಗ್ಸ್ ಮಾರಾಟದಿಂದ ಬಂದ ಲಾಭದ ಹಣವನ್ನು ರಾಗಿಣಿ, ಸಂಜನಾ ಸೇರಿದಂತೆ ಎಲ್ಲಾ ಅರೋಪಿಗಳಿಗೆ ವಿರೇನ್ ಖನ್ನಾ ಹಂಚಿದ್ದಾರೆ.
ಕೋಟಿ ವ್ಯವಹಾರ:
ಕೋಟಿಗಟ್ಟಲೇ ವ್ಯವಹಾರ ನಡೆಸಿರುವ ವಿರೇನ್ ಖನ್ನಾ ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಯ ಬಹುಪಾಲು ಹಣಗಳಿಕೆ ಅಕ್ರಮ ಎಂದು ಅನುಮಾನವೂ ವ್ಯಕ್ತವಾಗಿತ್ತು.
ಈ ಅರೋಪಿಗಳನ್ನು ಮೂರು ಭಾಗಗಳಾಗಿ ವಿಂಗಡಿಸಿ, ಫೈನಾನ್ಷಿಯರ್ಸ್, ಡ್ರಗ್ಸ್ ಪೆಡ್ಲರ್ಸ್, ಫೆಸಿಲಿಟೇಟರ್ಸ್ ಎಂದು ಗುರುತಿಸಲಾಗಿದೆ. ಇಲ್ಲಿ ಬಹುಮುಖ್ಯ ಹಣಕಾಸು ವ್ಯವಹಾರ ಮತ್ತು ವ್ಯವಸ್ಥೆಗಳನ್ನು ವಿರೇನ್ ಖನ್ನಾ ಮಾಡಿಸುತಿದ್ದ. ನೈಜೀರಿಯಾ ಪ್ರಜೆಗಳು, ಮೆಸ್ಸಿ, ಪ್ರತೀಕ್ ಶೆಟ್ಟಿ ಇವರುಗಳ ಮೂಲಕ ಡ್ರಗ್ಸ್ ಪೆಡ್ಲಿಂಗ್ ಮಾಡಲಾಗುತಿತ್ತು. ಇವರೊಂದಿಗೆ ರಾಗಿಣಿ, ಸಂಜನಾ ಸಹ ಹಲವು ಬಾರಿ ನೇರವಾಗಿ ವ್ಯವಹಾರ ನಡೆಸಿದ್ದಾರೆ.
ಗ್ರಾಹಕರು ಸೆಳೆಯುತ್ತಿದ್ದ:
ಈ ಎಲ್ಲಾ ವ್ಯವಹಾರಗಳಿಗೆ ವಿರೇನ್ ಖನ್ನಾ ಸೂತ್ರಧಾರನಾಗಿರುತಿದ್ದ. ಆತ ರಾಗಿಣಿ ಸಂಜನಾ ಮೂಲಕ ಯುವಜನತೆಯನ್ನು ಸೆಳೆಯುತ್ತಿದ್ದು ಸೆಲೆಬ್ರಿಟಿಗಳು ಪಾರ್ಟಿಯಲ್ಲಿ ಭಾಗಿಯಾಗ್ತಾರೆ ಎನ್ನುವುದನ್ನೆ ಬಂಡವಾಳ ಮಾಡಿಕೊಂಡು ಐಶಾರಾಮಿ ಹೋಟೆಲ್ ಬುಕ್ ಮಾಡುತಿದ್ದ ಎನ್ನಲಾಗಿದೆ.
ಕಳೆದ ೨೦೧೮ ರಿಂದ ಸಕ್ರಿಯವಾಗಿದ್ದ ಈ ಜಾಲದಿಂದ ಬಾಣಸವಾಡಿಯಲ್ಲಿ ವಶಪಡಿಸಿಕೊಂಡಿದ್ದ ಡ್ರಗ್ಸ್ ಮೌಲ್ಯವೇ ಸುಮಾರು ಒಂದೂವರೆ ಕೋಟಿ ರೂಪಾಯಿ ಆಗಿತ್ತು.

ಸಿಸಿಬಿ ಸಿಕ್ಕ ದೊಡ್ಡ ಜಯ
ಡ್ರಗ್ಸ್ ಪ್ರಕರಣ ಸಂಬಂಧ ಹೈದರಾಬಾದ್ ಎಫ್‌ಎಸ್‌ಎಲ್??ನಿಂದ ಬಂದಿರುವ ವರದಿಯಲ್ಲಿ ಎಲ್ಲಾ ಆರೋಪಿಗಳು ಡ್ರಗ್ಸ್ ಸೇವನೆ ಮಾಡಿರುವುದು ದೃಢವಾಗಿದೆ ಇದು ದಕ್ಷತೆ, ಪ್ರಾಮಾಣಿಕತೆಯಿಂದ ಕೆಲಸ ಮಾಡಿದ ಸಿಸಿಬಿ ಅಧಿಕಾರಿಗಳಿಗೆ ಸಿಕ್ಕ ಜಯವಾಗಿದೆ.

ಕಮಲ್ ಪಂತ್, ನಗರ ಪೊಲೀಸ್ ಆಯುಕ್ತ