ರಾಗಿಣಿ ಬಗ್ಗೆ ಐಎಸ್‍ಡಿ ಪ್ರಶ್ನಿಸಿಲ್ಲ : ನಟ ಯೋಗೀಶ್‍

ಬೆಂಗಳೂರು, ಸೆ 22-ಸ್ಯಾಂಡಲ್ ವುಡ್‍ ಗೆ ಡ್ರಗ್ಸ್ ನಂಟು ಪ್ರಕರಣಕ್ಕೆ ಸಂಬಂಧಿಸಿ, ಐಎಸ್‍ಡಿ ವಿಚಾರಣೆ ಎದುರಿಸಿರುವ ನಟ ಯೋಗೀಶ್ ಅಲಿಯಾಸ್‍ ಲೂಸ್ ಮಾದಾ, ನಟಿ ರಾಗಿಣಿಗೂ ತಮಗೂ ಯಾವುದೇ ಸಂಬಂಧವಿಲ್ಲ ಹಾಗೂ ಆ ಬಗ್ಗೆ ಆಂತರಿಕ ಭದ್ರತಾ ವಿಭಾಗದ ಅಧಿಕಾರಿಗಳು ಪ್ರಶ್ನಿಸಿಲ್ಲ ಎಂದಿದ್ದಾರೆ.

ಕೋಣನಕುಂಟೆಯ ತಮ್ಮ ನಿವಾಸದ ಬಳಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಗಿಣಿ ಜತೆಗಿನ ಚಿತ್ರವೊಂದರಲ್ಲಿ ಅಭಿನಯಿಸಿದ ಬಳಿಕ 2013 ರಿಂದ ನನಗೂ ಆಕೆಗೂ ಯಾವುದೇ ಸಂಬಂಧವಿಲ್ಲ. ದೂರವಾಣಿ ಮೂಲಕವೂ ಸಂಪರ್ಕಿಸಿಲ್ಲ ಎಂದರು.

ಐಎಸ್‍ಡಿ ಅಧಿಕಾರಿಗಳು ಕೇಳಿರುವ ಎಲ್ಲ ಪ್ರಶ್ನೆಗಳಿಗೂ ಸಮರ್ಪಕವಾಗಿ ನನಗೆ ತಿಳಿದ ಉತ್ತರ ನೀಡಿದ್ದೇನೆ. ಮತ್ತಷ್ಟು ವಿಚಾರಣೆಗೆ ಕರೆದಲ್ಲಿ ಬರುವಂತೆ ಸೂಚಿಸಿದ್ದಾರೆ. ತಮಗೆ ಸಿಗರೇಟ್, ಮದ್ಯ, ಗುಟ್ಕಾ ಅಭ್ಯಾಸವಿದೆಯೇ ಹೊರತು, ಡ್ರಗ್ಸ್ ಚಟವಿಲ್ಲ ಎಂದು ತಿಳಿಸಿದರು.

ಸುಮಾರು 2 ಗಂಟೆಗಳ ವಿಚಾರಣೆಯಲ್ಲಿ ನಾನು ಭೇಟಿ ನೀಡಿರುವ ಸ್ಥಳಗಳ ಬಗ್ಗೆ, ಸಿನಿ ಜರ್ನಿಯ ಕುರಿತು ಮಾಹಿತಿ ಪಡೆದಿದ್ದಾರೆ ಎಂದ ಯೋಗೀಶ್, ಇತ್ತೀಚಿಗೆ ಮನೆಯಲ್ಲಿ ನಡೆಸಿದ ಪಾರ್ಟಿಯಲ್ಲಿ ಹೆಚ್ಚಿನ ಶಬ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿ ನೆರೆಹೊರೆಯವರು ದೂರು ನೀಡಿದ್ದು ನಿಜ. ಪೊಲೀಸರು ಮನೆಗೆ ಬಂದು ಗಲಾಟೆ ಮಾಡದಂತೆ ಎಚ್ಚರಿಸಿದ್ದೂ ನಿಜ. ಆದರೆ ಡ್ರಗ್ಸ್ ಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.

ಮುಂದಿನ ತಿಂಗಳು ಹೊಸ ಚಿತ್ರದ ಚಿತ್ರೀಕರಣ ನಡೆಯಲಿದ್ದು, ತಾವು ಹಾಜರಾಗುವುದಾಗಿ ಯೋಗೀಶ್ ಮಾಹಿತಿ ನೀಡಿದರು.