ರಾಗಿಣಿ ಜಾಮೀನು ಅರ್ಜಿ ಮುಂದೂಡಿಕೆ

ಬೆಂಗಳೂರು,ಸೆ.೧೬-ಡ್ರಗ್ ಜಾಲದಲ್ಲಿ ಭಾಗಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟಿ ರಾಗಿಣಿ ದ್ವಿವೇದಿ ಜಾಮೀನು ಅರ್ಜಿಯನ್ನ ನ್ಯಾಯಾಲಯ ಸೆಪ್ಟೆಂಬರ್ ೧೯ಕ್ಕೆ ಮುಂದೂಡಿದೆ.
ಕಳೆದ ಸೆ.೧೨ ರಂದು ನ್ಯಾಯಾಲಯ ನಟಿ ರಾಗಿಣಿ ದ್ವಿವೇದಿಯನ್ನ ೧೪ ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿತ್ತು. ಇಂದು ಜಾಮೀನು ಕೋರಿ ರಾಗಿಣಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದ ಮುಂದೆ ಬಂದಿತ್ತು.
ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು, ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಬೇಕೆಂದು ಸಿಸಿಬಿ ಪರ ವಕೀಲರು ನ್ಯಾಯಾಧೀಶರ ಮುಂದೆ ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆ ಜಾಮೀನು ಅರ್ಜಿಯ ವಿಚಾರಣೆಯನ್ನ ಸೆ.೧೯ಕ್ಕೆ ಮುಂದೂಡಿ ನ್ಯಾಯಾಧೀಶರು ಆದೇಶಿಸಿದ್ದಾರೆ.
ಇದರಿಂದಾಗಿ ನಟಿ ರಾಗಿಣಿ ಮತ್ತೆ ಮೂರು ದಿನಗಳ ಕಾಲ ಜೈಲಿನ ಕಂಬಿ ಎಣಿಸಬೇಕಾಗಿದೆ ಈ ನಡುವೆ ಜೈಲಿನಲ್ಲಿರುವ ರಾಗಿಣಿ ಅವರ ಆರೋಗ್ಯ ತಪಾಸಣೆ ನಡೆಸಲಾಗುತ್ತಿದ್ದು ಅವರಿಗೆ ಗಂಭೀರ ಆರೋಗ್ಯ ಸಮಸ್ಯೆ ಗಳಿಲ್ಲ ಎಂದು ತಿಳಿದುಬಂದಿದೆ.
ಜೈಲಿನಲ್ಲಿರುವ ಮಗಳನ್ನು ನೋಡಲು ಬಂದಿದ್ದ ರಾಗಿಣಿ ತಾಯಿ ರೋಹಿಣಿ ದ್ವಿವೇದಿ, ನನ್ನ ಮಗಳು ಹತ್ತು ವರ್ಷಗಳಿಂದ ಕನ್ನಡ ಇಂಡಸ್ಟ್ರಿಯಲ್ಲಿ ದುಡಿದಿದ್ದಾಳೆ. ನಮ್ಮ ಬಳಿ ಇರುವುದು ಒಂದೇ ಫ್ಲ್ಯಾಟ್. ಮಾಧ್ಯಮಗಳಲ್ಲಿ ಮೂರು ಮೂರು ಫ್ಲ್ಯಾಟ್ ಗಳಿವೆ ಎಂದು ಬಿಂಬಿಸಲಾಗುತ್ತಿದೆ. ನಾವು ಇಡಿ ಗೆ ಈಗಾಗಲೆ ಮಾಹಿತಿ ನೀಡಿದ್ದೇವೆ. ಆಕೆ ಹೆಣ್ಣು ಸಿಂಹ ಇದ್ದ ಹಾಗೆ. ನಾವು ಯಾವುದಕ್ಕು ಹೆದರುವುದಿಲ್ಲ ಎಂದು ಹೇಳಿದ್ದರು.