ರಾಗಾ ಬಿಕ್ಕಟ್ಟು, ವಿಪಕ್ಷಗಳ ಒಗ್ಗಟ್ಟು

ನವದೆಹಲಿ,ಮಾ.೨೭- ಮಾನನಷ್ಟ ಪ್ರಕರಣದಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಲೋಕಸಭಾ ಸದಸ್ಯ ಸ್ಥಾನದಿಂದ ಅನರ್ಹ ಮಾಡಿರುವ ಕ್ರಮ, ವಿರೋಧ ಪಕ್ಷಗಳ ಆಕ್ರೋಶ ಭುಗಿಲೆದಿದ್ದಿದೆ. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ನೇತೃತ್ವದಲ್ಲಿ ೧೭ ಪಕ್ಷಗಳು ತಿರುಗಿಬಿದ್ದಿವೆ. ಉಭಯ ಸದನಗಳಲ್ಲಿ ಕಪ್ಪು ಬಟ್ಟೆ ಧರಿಸಿ ಕೇಂದ್ರ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಿ ಭಾರೀ ಕೋಲಾಹಲ ಉಂಟಾಗಿದ್ದರಿಂದ ಸಂಸತ್ ಕಲಾಪವನ್ನು ಮುಂದೂಡಲಾಗಿದೆ.
ಬೆಳಗ್ಗೆ ಸದನ ಆರಂಭವಾಗುತ್ತಿದ್ದಂತೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಕಾಂಗ್ರೆಸ್, ಮುಸ್ಲಿಂ ಲೀಗ್, ಜೆಡಿಯು, ಎಸ್‌ಪಿ, ಡಿಎಂಕೆ, ಎನ್‌ಸಿಪಿ, ಸಿಪಿಎಂ, ಕೆಸಿಎಂ, ಆರೆಸ್‌ಪಿ, ಎಂಡಿಎಂಕೆ, ಎನ್‌ಸಿಪಿ, ಸಿಪಿಐ ಜೊತೆಗೆ ಇದೇ ಮೊದಲ ಬಾರಿಗೆ ಟಿಎಂಸಿ ಸದಸ್ಯರೂ ಕೂಡ ವಿರೋಧ ಪಕ್ಷಗಳ ನಾಯಕರು ನಡೆಸುತ್ತಿರುವ ಪ್ರತಿಭಟನೆಗೆ ಸಾಥ್ ನೀಡಿದರು.
ವಿರೋಧ ಪಕ್ಷಗಳ ಸದಸ್ಯರು ಸದನದ ಬಾವಿಗಿಳಿದು ರಾಹುಲ್ ಗಾಂಧಿ ಅನರ್ಹತೆ ವಿಷಯ ರಾಜಕೀಯ ಸೇಡಿನ ಕ್ರಮ, ಉದ್ಯಮಿ ಗೌತಮ್ ಅದಾನಿ ಷೇರು ವಂಚನೆ ಪ್ರಕರಣವನ್ನು ಜಂಟಿ ಸಂಸದೀಯ ಸಮಿತಿ ಮೂಲಕ ತನಿಖೆ ನಡೆಸುವಂತೆ ಉಭಯ ಸದನಗಳಲ್ಲಿ ಸದನದ ಬಾವಿಗಿಳಿದು ಧರಣಿ ನಡೆಸಿದರು. ಕಲಾಪ ಆರಂಭವಾದ ಕೆಲವೇ ನಿಮಿಷಗಳಲ್ಲಿ ಕಲಾಪ ಮುಂದೂಡಲಾಯಿತು.ಲೋಕಸಭೆ ಆರಂಭವಾದ ಕ್ಷಣ ಮಾತ್ರದಲ್ಲಿ ಕೋಲಾಹಲ ಉಂಟಾದರಿಂದ ಸಭಾಧ್ಯಕ್ಷ ಓಂ ಬಿರ್ಲಾ ಕಲಾಪವನ್ನು ಸಂಜೆ ೪ ಗಂಟೆಗೆ ಮುಂದೂಡಿದರು. ಇನ್ನು ರಾಜ್ಯಸಭೆಯಲ್ಲಿಯೂ ಇದೇ ವಿಷಯಕ್ಕೆ ಕೋಲಾಹಲ ಉಂಟಾಗಿದ್ದರಿಂದ ಸಭಾಪತಿ ಜಗದೀಪ್ ಧನ್‌ಕರ್ ಕಲಾಪವನ್ನು ಮಧ್ಯಾಹ್ನ ೨ ಗಂಟೆಗೆ ಮುಂದೂಡಿದರು.
ಮೊದಲ ಬಾರಿ ಸಾಥ್;
ಕಳೆದ ಎರಡು ವಾರಗಳಿಂದ ವಿವಿಧ ವಿಷಯಗಳನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳ ನಾಯಕರು ನಡೆಸುತ್ತಿದ್ದ ಹೋರಾಟದಲ್ಲಿ ಕೈ ಜೋಡಿಸಿದ ಟಿಎಂಸಿ ಸಂಸದರು ಇಂದು ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕಚೇರಿಯಲ್ಲಿ ನಡೆದ ವಿರೋಧಪಕ್ಷಗಳ ನಾಯಕರ ಸಭೆಯಲ್ಲಿ ಪಾಲ್ಗೊಂಡು ರಾಹುಲ್ ಗಾಂಧಿ ಅವರ ಸದಸ್ಯತ್ವ ಅನರ್ಹತೆ ವಿಷಯದಲ್ಲಿ ಒಗ್ಗಟ್ಟಿನಿಂದ ಹೋರಾಟಲು ಸಾಥ್ ನೀಡಿದ್ದಾರೆ.
ಸಭೆಯಲ್ಲಿ ಕಾಂಗ್ರೆಸ್, ಮುಸ್ಲಿಂ ಲೀಗ್, ಜೆಡಿಯು, ಎಸ್‌ಪಿ, ಡಿಎಂಕೆ, ಎನ್‌ಸಿಪಿ, ಸಿಪಿಎಂ, ಕೆಸಿಎಂ, ಆರೆಸ್‌ಪಿ, ಎಂಡಿಎಂಕೆ, ಎನ್‌ಸಿಪಿ, ಸಿಪಿಐ, ಶಿವಸೇನೆ ಉದ್ದವ್ ಠಾಕ್ರೆ ಬಣ ಸೇರಿದಂತೆ ಪ್ರಮಖ ರಾಜಕೀಯ ಪಕ್ಷಗಳ ನಾಯಕರು ಕಪ್ಪು ಬಟ್ಟೆ ಧರಿಸಿ ಉಭಯ ಸದನಗಳಲ್ಲಿ ಹೋರಾಟ ಮಾಡುವ ನಿರ್ಧಾರ ಕೈಗೊಂಡರು.

ಸೋನಿಯಾ ಅಧ್ಯಕ್ಷತೆಯಲ್ಲಿ ಸಭೆ
ಮತ್ತೊಂದೆಡೆ ಕಾಂಗ್ರೆಸ್ ಸಂಸದೀಯ ಸಮಿತಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಕಚೇರಿಯಲ್ಲಿ ಕಾಂಗ್ರೆಸ್ ಸಂಸದರು ಸಭೆ ನಡೆಸಿ ಉಭಯ ಸದನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಸಲು ನಿರ್ಧರಿಸಿದರು.
ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರು ಪಾಲ್ಗೊಂಡಿದ್ದರು. ಸಭೆಯಲ್ಲಿ ಎಲ್ಲಾ ಸದಸ್ಯರು ಕಪ್ಪು ಬಟ್ಟೆ ಧರಿಸಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ದ ಹರಿಹಾಯ್ದರು.

ಗಾಂಧಿ ಪ್ರತಿಮೆ ಬಳಿ ಧರಣಿ
ಸಂಸತ್ತಿನ ಉಭಯ ಸದನಗಳ ಕಲಾಪ ಮುಂದೂಡುತ್ತಿದ್ದಂತೆ ಕಾಂಗ್ರೆಸ್ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ವಿರೋಧ ಪಕ್ಷಗಳ ನಾಯಕರು ಸಂಸತ್ ಆವರಣದಲ್ಲಿರುವ ಗಾಂಧಿ ಪ್ರತಿಮೆಯ ಬಳಿ ಧರಣಿ ನಡೆಸಿ ಕೇಂದ್ರ ಸರ್ಕಾರದ ಸೇಡಿನ ರಾಜಕಾರಣದ ವಿರುದ್ದ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್, ಮುಸ್ಲಿಂ ಲೀಗ್, ಜೆಡಿಯು, ಎಸ್‌ಪಿ, ಡಿಎಂಕೆ, ಎನ್‌ಸಿಪಿ, ಸಿಪಿಎಂ, ಕೆಸಿಎಂ, ಆರೆಸ್‌ಪಿ, ಎಂಡಿಎಂಕೆ, ಎನ್‌ಸಿಪಿ, ಸಿಪಿಐ,ಶೀವಸೇನೆ ಉದ್ದವ್ ಠಾಕ್ರೆ ಬಣ ಸೇರಿದಂತೆ ಪ್ರಮುಖ ವಿರೋಧ ಪಕ್ಷದ ನಾಯಕರು ಪಾಲ್ಗೊಂಡಿದ್ದರು.
ಗಾಂಧಿ ಪ್ರತಿಮೆಯಿಂದ ವಿಜಯ್ ಚೌಕ ತನಕ ವಿರೋಧ ಪಕ್ಷಗಳ ನಾಯಕರು ಜಾಥಾ ನಡೆಸಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಾರಿ ಬಿಇ ಭದ್ರತೆ ಒದಗಿಸಲಾಗಿದೆ.