ರಾಗಾಗೆ ಮತ್ತೆ ದಕ್ಕಿದ ಸಂಸದ ಸ್ಥಾನ

ನವದೆಹಲಿ,ಆ.೭: ಕಾಂಗ್ರೆಸ್‌ನ ಯುವ ನಾಯಕ ರಾಹುಲ್‌ಗಾಂಧಿ ಅವರ ಲೋಕಸಭಾ ಸಚಿವಾಲಯ ಅನರ್ಹತೆ ರದ್ದಾಗಿದ್ದು, ಅವರ ಸದಸ್ಯತ್ವ ಪುನರ್ ಸ್ಥಾಪಿಸುವ ಆದೇಶ ಹೊರಬಿದ್ದಿದೆ. ಲೋಕಸಭಾ ಸಚಿವಾಲಯ ರಾಹುಲ್‌ಗಾಂಧಿ ಅವರ ಸಂಸತ್ ಸದಸ್ಯತ್ವವನ್ನು ರದ್ದು ಮಾಡಿದ್ದು, ರಾಹುಲ್‌ಗಾಂಧಿ ಮರಳಿ ಲೋಕಸಭಾ ಸದಸ್ಯರಾಗಿದ್ದಾರೆ.
ಮೋದಿ ಉಪನಾಮಕ್ಕೆ ಸಂಬಂಧಿಸಿದಂತೆ ಸೂರತ್ ನ್ಯಾಯಾಲಯ ರಾಹುಲ್‌ಗಾಂಧಿ ಅವರಿಗೆ ೨ ವಷಗಳ ಜೈಲು ಶಿಕ್ಷೆ ವಿಧಿಸಿತ್ತು. ಈ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದ್ದ ಬೆನ್ನಲ್ಲೆ ರಾಹುಲ್‌ಗಾಂಧಿ ಅವರ ಲೋಕಸಭಾ ಸದಸ್ಯತ್ವವನ್ನು ಪುನರ್ ಸ್ಥಾಪಿಸಲಾಗಿದೆ.
ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ಲೋಕಸಭಾ ಸಚಿವಾಲಯ ರಾಹುಲ್ ಆವರ ಸದಸ್ಯತ್ವ ಅನರ್ಹತೆಯ ಆದೇಶವನ್ನು ಹಿಂಪಡೆಯಲಾಗಿದ್ದು, ಸದಸ್ಯತ್ವವನ್ನು ಮರು ಸ್ಥಾಪಿಸಲಾಗಿದೆ ಎಂದು ತಿಳಿಸಿದೆ. ರಾಹುಲ್‌ಗಾಂಧಿ ಅವರು ಮೋದಿ ಉಪನಾಮ ಪ್ರಕರಣದಲ್ಲಿ ದೋಷಿ ಎಂದು ಸೂರತ್ ನ್ಯಾಯಾಲಯ ತೀರ್ಪು ನೀಡಿದ್ದ ಮಾರನೇ ದಿನವೇ ಲೋಕಸಭೆಯ ಪ್ರಧಾನ ಕಾರ್ಯದರ್ಶಿ ಅವರ ರಾಹುಲ್‌ಗಾಂಧಿ ಅವರ ಸದಸ್ಯತ್ವ ಅನರ್ಹಗೊಳಿಸಿ ಆದೇಶ ಹೊರಡಿಸಿದ್ದರು.
ಸೂರತ್ ನ್ಯಾಯಾಲಯದ ಅದೇಶಕ್ಕೆ ಕಳೆದ ಶುಕ್ರವಾರ ಸುಪ್ರೀಂಕೋರ್ಟ್ ತಡೆ ನೀಡಿತ್ತು. ನ್ಯಾಯಾಲಯ ಶಿಕ್ಷೆ ವಿಧಿಸಿದಾಗ ಸಂಸತ್ ಸದಸ್ಯತ್ವವನ್ನು ಎಷ್ಟು ವೇಗವಾಗಿ ಅನರ್ಹಗೊಳಿಸಲಾಯಿತೋ ಈಗ ಅದೇ ವೇಗದಲ್ಲಿ ಸದಸ್ಯತ್ವ ಅನರ್ಹತೆಯನ್ನು ರದ್ದು ಮಾಡಬೇಕು ಎಂದು ಕಾಂಗ್ರೆಸ್ ಪಕ್ಷ ಶನಿವಾರ ಆಗ್ರಹಿಸಿತ್ತು.
ಸಂಸತ್ ಕಲಾಪಗಳಿಗೆ ಶನಿವಾರ ಭಾನುವಾರ ರಜಾ ಇದ್ದ ಕಾರಣ ಅನರ್ಹತೆಯನ್ನು ರದ್ದು ಮಾಡುವ ತೀರ್ಮಾನಗಳನ್ನು ಮಾಡಲಾಗಿರಲಿಲ್ಲ.ಇಂದು ರಾಹುಲ್‌ಗಾಂಧಿ ರವರ ಅನರ್ಹತೆಯನ್ನು ರದ್ದುಮಾಡುತ್ತಾರೋ ಇಲ್ಲವೋ ಎಂಬ ಕುತೂಹಲವೂ ಇತ್ತು. ಈ ಎಲ್ಲ ಕುತೂಹಲಗಳಿಗೆ ತೆರೆ ಎಳೆದಿರುವ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಇಂದಿನ ಲೋಕಸಭಾ ಕಲಾಪ ಆರಂಭಕ್ಕೂ ಮುನ್ನವೇ ರಾಹುಲ್‌ಗಾಂಧಿ ಅನರ್ಹತೆಯ ಆದೇಶವನ್ನು ರದ್ದುಪಡಿಸಿದ್ದಾರೆ.ಹೀಗಾಗಿ, ರಾಹುಲ್‌ಗಾಂಧಿ ಅವರು ಮರಳಿ ತಮ್ಮ ಲೋಕಸಭಾ ಸದಸ್ಯತ್ವವನ್ನು ಪಡೆದುಕೊಂಡಿದ್ದಾರೆ. ರಾಹುಲ್‌ಗಾಂಧಿ ಅವರು ಕೇರಳದ ವಯನಾಡು ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಈ ಹಿಂದೆ ಲಕ್ಷದ್ವೀಪದ ಸಂಸದ ಮೊಹ್ಮದ್ ಫೈಜಲ್ ಅವರ ಶಿಕ್ಷೆಗೆ ನ್ಯಾಯಾಲಯ ತಡೆನೀಡಿದ ೨ ತಿಂಗಳ ಬಳಿಕ ಅವರ ಅನರ್ಹತೆಯನ್ನು ರದ್ದುಗೊಳಿಸಲಾಗಿತ್ತು, ಅನರ್ಹತೆಯನ್ನು ರದ್ದುಗೊಳಿಸುವಂತೆ ಮೊಹ್ಮದ್ ಫೈಜಲ್ ಸುಪ್ರೀಂಕೋರ್ಟಿನ ಕದ ತಟ್ಟಿದ ಅನರ್ಹತೆಯ ರದ್ದು ಆದೇಶವನ್ನು ಹೊರಡಿಸಲಾಗಿತ್ತು.ಆದರೆ ರಾಹುಲ್‌ಗಾಂಧಿ ಅವರ ಪ್ರಕರಣದಲ್ಲಿ ತಡ ಮಾಡದೆ ಲೋಕಸಭಾ ಸ್ಪೀಕರ್ ಅವರು ಅನರ್ಹತೆಯ ಆದೇಶವನ್ನು ಹೊರಡಿಸುವ ಮೂಲಕ ಯಾವುದೇ ಕಾನೂನು ಸಂಘರ್ಷಕ್ಕೆ ಅವಕಾಶ ನೀಡಿಲ್ಲ.
ಪ್ರಕರಣವೇನು ರಾಹುಲ್‌ಗಾಂಧಿ ಅವರು ೨೦೧೯ರ ಲೋಕಸಭಾ ಚುನಾವಣೆಯ ವೇಳೆ ಕರ್ನಾಟಕದ ಕೋಲಾರದಲ್ಲಿ ಸಾರ್ವಜನಿಕಸಭೆಯಲ್ಲಿ ಮಾತನಾಡುವಾಗ ಮೋದಿ ಉಪನಾಮ ಇರುವವರೆಲ್ಲ ಕಳ್ಳರೇ ಯಾಕಾಗಿರುತ್ತಾರೆ ಎಂದು ಹೇಳಿದ್ದು ವಿವಾದಕ್ಕೆ ಕಾರಣವಾಗಿ ಅವರ ಹೇಳಿಕೆಯನ್ನಿಟ್ಟುಕೊಂಡು ಗುಜರಾತಿನ ಮಾಜಿ ಶಾಸಕ ಪೂರ್ಣೇಶ್ ಮೋದಿ ಸೂರತ್ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಈ ಪ್ರಕರಣದಲ್ಲಿ ಸೂರತ್ ನ್ಯಾಯಾಲಯ ರಾಹುಲ್‌ಗಾಂಧಿ ಅವರಿಗೆ ೨ ವರ್ಷ ಜೈಲು ಶಿಕ್ಷೆ ವಿಧಿಸಿತ್ತು ಹಾಗಾಗಿ ಅವರ ಲೋಕಸಭಾ ಸದಸ್ಯತ್ವವನ್ನು ಅನರ್ಹಗೊಳಿಸಲಾಗಿತ್ತು. ಸೂರತ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ರಾಹುಲ್‌ಗಾಂಧಿ ಅವರು ಅಲಹಾಬಾದ್ ಹೈಕೋರ್ಟ್‌ನ ಮೊರೆ ಹೋಗಿದ್ದು. ಆದರೆ, ಅಲಹಾಬಾದ್ ಹೈಕೋರ್ಟ್ ಸಹಸೂರತ್ ನ್ಯಾಯಾಲಯದ ಅದೇಶವನ್ನು ಎತ್ತಿ ಹಿಡಿದಿತ್ತು, ಇದನ್ನು ಪ್ರಶ್ನಿಸಿ ರಾಹುಲ್‌ಗಾಂಧಿ ಅವರು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಕಳೆದ ಶುಕ್ರವಾರ ಸುಪ್ರೀಂಕೋಟ್ ಆದೇಶಕ್ಕೆ ತಡೆ ನೀಡಿತ್ತು.

ಮರಳಿ ಬಂಗಲೆ ಸಿಗುತ್ತಾ

ಲೋಕಸಭಾ ಸದಸ್ಯತ್ವವನ್ನು ಮರಳಿ ಪಡೆದಿರುವ ರಾಹುಲ್ ಅವರಿಗೆ ಅವರು ಈ ಹಿಂದೆ ಲೋಕಸಭಾ ಸದಸ್ಯರಾಗಿದ್ಸಾಗ ದೆಹಲಿಯಲ್ಲಿ ನೀಡಲಾಗಿದ್ದ ಬಂಗಲೆಯನ್ನು ಮರಳಿ ಪಡೆಯುತ್ತಾರೆಯೇ ಎಂಬುದು ಈಗ ಚರ್ಚೆಗೆ ಗ್ರಾಸವಾಗಿದೆ.
ಲೋಕಸಭಾ ಸದಸ್ಯತ್ವದಿಂದ ರಾಹುಲ್‌ಗಾಂಧಿ ಅವರು ಅನರ್ಹರಾದ ನಂತರ ಅವರು ವಾಸವಿದ್ದ ದೆಹಲಿಯ ತುಘಲಕ್ ಲೇನ್‌ನ ೧೨ನೇ ನಂಬರ್ ಬಂಗಲೆಯನ್ನು ಖಾಲಿ ಮಾಡುವಂತೆ ಸೂಚಿಸಲಾಗಿತ್ತು ಅದರಂತೆ ರಾಹುಲ್ ಅವರು ೧ ತಿಂಗಳ ನಂತರ ಖಾಲಿ ಮಾಡಿದ್ದರು. ಈಗ ರಾಹುಲ್ ಅವರ ಸದಸ್ಯತ್ವ ಮರು ಸ್ಥಾಪನೆಯಾಗಿರುವುದರಿಂದ ಅವರು ಈ ಹಿಂದೆ ವಾಸ ಮಾಡುತ್ತಿದ್ದ ದೆಹಲಿಯ ತುಘಲಕ್ ಲೇನ್ ಬಂಗಲೆಯನ್ನು ಮರಳಿ ಪಡೆಯುತ್ತಾರೆಯೇ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.