ರಾಕೆಟ್ ವೇಗದಲ್ಲಿ ಸೋಂಕು ಹೆಚ್ಚಳ

ನವದೆಹಲಿ, ಮಾ.೨೨- ದೇಶದಲ್ಲಿ ಎರಡನೇ ಅಲೆಯ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ದಿನದಿಂದ ದಿನಕ್ಕೆ ಸೋಂಕು ಹೆಚ್ಚಳ ಪ್ರಮಾಣ ರಾಕೆಟ್ ವೇಗ ಪಡೆಯುತ್ತಿದೆ. ನವೆಂಬರ್ ಬಳಿಕ ಅತ್ಯಧಿಕ ಮಂದಿಗೆ ಸೋಂಕು ಕಾಣಿಸಿಕೊಂಡಿದೆ.
ಕಳೆದ ೧೨ ದಿನಗಳಿಂದ ಸತತವಾಗಿ ಸೋಂಕು ಪ್ರಮಾಣ ಏರಿಕೆಯಾಗುತ್ತಿದೆ. ನಿನ್ನೆ ದಾಖಲಾಗಿದ್ದ ಸೋಂಕು ಪ್ರಮಾಣಕ್ಕಿಂತ ಇಂದು ಸರಿಸುಮಾರು ೩ ಸಾವಿರಕ್ಕೂ ಹೆಚ್ಚು ಸೋಂಕು ಪ್ರಕರಣ ದೃಢಪಟ್ಟಿವೆ. ಕಳೆದ ೨೪ ಗಂಟೆಗಳಲ್ಲಿ ೪೬,೯೫೧ ಹೊಸ ಪ್ರಕರಣ ಕಾಣಿಸಿಕೊಂಡಿದ್ದು, ಈ ವರ್ಷದಲ್ಲಿ ಅತಿ ಹೆಚ್ಚಿನ ಸೋಂಕು ದಾಖಲಾಗಿದೆ.
ಇಂದು ಬೆಳಿಗ್ಗೆ ೮ ಗಂಟೆಯ ತನಕ ೨೧೨ ಮಂದಿ ಸೋಂಕಿನಿಂದ ಮೃತಪಟ್ಟಿದ್ದು, ಈ ವರ್ಷದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ದಿನದಲ್ಲಿ ಇದೇ ಮೊದಲ ಬಾರಿಗೆ ದ್ವಿಶತಕ ಬಾರಿಸಿದೆ. ನಿನ್ನೆಯಿಂದ ಬೆಳಿಗ್ಗೆ ತನಕ ೨೧೨ ಮಂದಿ ಸಾವನ್ನಪ್ಪಿದ್ದು, ಇಂದು ೨೧,೧೮೦ ಮಂದಿ ಚೇತರಿಸಿಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಹೊಸದಾಗಿ ಕಾಣಿಸಿಕೊಂಡಿರುವ ಸೋಂಕಿನಿಂದ ಇಲ್ಲಿಯವರೆಗೆ ೧,೧೬,೪೬,೦೮೧ ಏರಿಕೆಯಾಗಿದೆ. ದೇಶದಲ್ಲಿ ಇದುವರೆಗೆ ೧,೧೧,೫೧,೪೬೮ ಮಂದಿ ಗುಣಮುಖರಾಗಿದ್ದಾರೆ. ಇಲ್ಲಿಯವರೆಗೆ ೧,೫೯,೯೬೭ ಮಂದಿ ಮೃತಪಟ್ಟಿದ್ದಾರೆ ಎಂದು ಸಚಿವಾಲಯ ಮಾಹಿತಿ ನೀಡಿದೆ.
ಕಳೆದ ವರ್ಷ ನವೆಂಬರ್ ೧೨ ರಂದು ೪೭,೯೦೫ ಮಂದಿಗೆ ಸೋಂಕು ಕಾಣಿಸಿಕೊಂಡಿತ್ತು. ಅದಾದ ಬಳಿಕ ಇಂದು ಹೆಚ್ಚಿನ ಪ್ರಮಾಣದಲ್ಲಿ ಸೋಂಕು ದೃಢಪಟ್ಟಿದೆ.
ದೇಶದಲ್ಲಿ ಪ್ರತಿದಿನ ದಾಖಲಾಗುತ್ತಿರುವ ಒಟ್ಟಾರೆ ಸೋಂಕಿನ ಪೈಕಿ ಮಹಾರಾಷ್ಟ್ರ ಒಂದರಲ್ಲಿ ಅರ್ಧಕ್ಕಿಂತ ಹೆಚ್ಚಿನ ಪ್ರಕರಣಗಳು ದೃಢಪಡುತ್ತಿವೆ.
೨ ಲಕ್ಷ ಸಕ್ರಿಯ ಪ್ರಕರಣ ಏರಿಕೆ:
ಫೆಬ್ರವರಿ ಮಧ್ಯಭಾಗದವರೆಗೆ ದೇಶಗಳಲ್ಲಿ ೧.೩೫ ಲಕ್ಷದಷ್ಟಿದ್ದ ಸಕ್ರಿಯ ಪ್ರಕರಣ ಸಂಖ್ಯೆ ಒಂದೂವರೆ ತಿಂಗಳಲ್ಲಿ ಸರಿಸುಮಾರು ಎರಡು ಲಕ್ಷ ಏರಿಕೆಯಾಗಿದೆ. ಇದರಿಂದಾಗಿ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ೩,೩೪,೬೪೬. ಹೆಚ್ಚಳವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ದೇಶದಲ್ಲಿ ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ ೨.೬೬ ರಷ್ಟಿದೆ. ಸಕ್ರಿಯ ಪ್ರಕರಣ ಏರಿಕೆಯ ಹಿನ್ನೆಲೆಯಲ್ಲಿ ಸೋಂಕಿನ ಚೇತರಿಕೆ ಪ್ರಮಾಣ ಗಣನೀಯವಾಗಿ ಕುಸಿಯುತ್ತಿದೆ. ಸದ್ಯ ಚೇತರಿಕೆ ಪ್ರಮಾಣ ೯೫.೯೬ ರಷ್ಟಿದೆ.
ಮಹಾರಾಷ್ಟ್ರ, ಕರ್ನಾಟಕ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಪಂಜಾಬ್ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಮುಕ್ತಿಯ ಸೋಂಕಿನ ಪ್ರಮಾಣ ಗಣನೀಯವಾಗಿ ಹೆಚ್ಚಳವಾಗುತ್ತಿದೆ.
ದೇಶದಲ್ಲಿ ಎರಡನೇ ಅಲೆಯ ಕೊರೊನಾ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಸಹಜವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ.

೪.೫೦ ಕೋಟಿಗೆ ಲಸಿಕೆ
ದೇಶದಲ್ಲಿ ಒಂದು ಕಡೆ ಕೊರೊನಾ ಸೋಂಕು ಏರಿಕೆಯಾಗುತ್ತದೆ. ಮತ್ತೊಂದು ಕಡೆ ಲಸಿಕೆ ಹಾಕುವ ಕಾರ್ಯ ಭರದಿಂದ ಸಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ದೇಶದಲ್ಲಿ ಇದುವರೆಗೆ ೪,೫೦,೬೫,೯೯೮ ಲಸಿಕೆ ಹಾಕಲಾಗಿದೆ. ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಲಸಿಕಾ ನೀಡಿಕೆ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸುವಂತೆ ಸೂಚಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಪರೀಕ್ಷೆ, ಪತ್ತೆ, ಚಿಕಿತ್ಸೆಗೆ ಸೂಚನೆ:
ದೇಶದಲ್ಲಿ ಕೊರೊನಾ ಸೋಂಕು ಗಣನೀಯವಾಗಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕು ಪತ್ತೆ ಪರೀಕ್ಷೆಯನ್ನು ಹೆಚ್ಚಳ ಮಾಡುವಂತೆ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಪರೀಕ್ಷೆ ಪತ್ತೆ ಮತ್ತು ಚಿಕಿತ್ಸೆ ಪ್ರಮಾಣವನ್ನು ಹೆಚ್ಚಳ ಮಾಡುವ ಮೂಲಕ ಸೋಂಕು ತಡೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.