ರಾಂಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಜಿ.ಪಂ ಸಿಇಒ ಭೇಟಿ

ಚಿತ್ರದುರ್ಗ.ಫೆ.೨೩: ಮೊಳಕಾಲ್ಮುರು ತಾಲ್ಲೂಕು ರಾಂಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬುಧವಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್. ಭೇಟಿ ನೀಡಿ, ಪರಿಶೀಲನೆ ನಡೆಸಿದರು.ರಾಂಪುರ ಸಮುದಾಯ ಆರೋಗ್ಯ ಕೇಂದ್ರದ ದಾಸ್ತಾನು ಕೊಠಡಿ, ಔಷಧಿ ಕೊಠಡಿ, ರೋಗಿಗಳ ಕೊಠಡಿಗಳಿಗೆ ಖುದ್ದು ಭೇಟಿ ನೀಡಿ, ಪರಿಶೀಲನೆ ನಡೆಸಿದ ಅವರು, ನವಜಾತ ಶಿಶು ಹಾಗೂ ಗರ್ಭಿಣಿ ಸ್ತ್ರೀಯರ ಹಾರೈಕೆ ಮತ್ತು ಆರೋಗ್ಯ ಔಷಧೋಪಚಾರಗಳ ಬಗ್ಗೆ ವಿಚಾರಿಸಿದರು. ಕೆಲ ಹೊತ್ತು ರೋಗಿಗಳ ಆರೋಗ್ಯ ವಿಚಾರ ನಡೆಸಿ, ಕೆಲ ರೋಗಿಗಳ ರಕ್ತದೊತ್ತಡ ತಪಾಸಣೆ ನಡೆಸಿದರು.ಆಸ್ಪತ್ರೆಯ ಮೂಲ ಸೌಕರ್ಯ, ಸ್ವಚ್ಛತೆಯ ಬಗ್ಗೆ ವೈದ್ಯರು, ಶುಶ್ರೂಷಕಿಯರು ಹಾಗೂ ಸಿಬ್ಬಂದಿಗಳಿಂದ ಮಾಹಿತಿ ಪಡೆದುಕೊಂಡರು.
ಆಸ್ಪತ್ರೆಯಲ್ಲಿ ದಿನಕ್ಕೆ ಸುಮಾರು 250 ರಿಂದ 300 ಹೊರ ರೋಗಿಗಳು ಬಂದು ಹೋಗುತ್ತಾರೆ. ಒಂದು ತಿಂಗಳಿಗೆ 8 ರಿಂದ 10 ಬಾಣಂತಿಯರಿಗೆ ಹೆರಿಗೆ ಮಾಡಿ ಹಾರೈಕೆ ಮಾಡಲಾಗುತ್ತಿದೆ ಎಂದು ವೈದ್ಯಾಧಿಕಾರಿಗಳು ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಮೊಳಕಾಲ್ಮುರು ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಜಾನಕಿರಾಮ್, ಆಸ್ಪತ್ರೆಯ ವೈದ್ಯಾಧಿಕಾರಿಗಳು, ಶುಶ್ರೂಷಕಿಯರು, ಸಿಬ್ಬಂದಿಗಳು, ರೋಗಿಗಳು ಹಾಗೂ ಸಾರ್ವಜನಿಕರು ಇದ್ದರು.