ರಾಂಚಿಯಲ್ಲಿ ಮೋದಿ ರೋಡ್ ಶೋ

ರಾಂಚಿ, ನ.೧೫- ಪಂಚ ರಾಜ್ಯಗಳ ಚುನಾವಣೆ ಹಿನ್ನೆಲೆ ಮತ ಬೇಟೆ ಆರಂಭಿಸಿರುವ ಪ್ರಧಾನಿ ನರೇಂದ್ರ ಮೋದಿ ನಿನ್ನೆ ರಾತ್ರಿ ೧೦ ಗಂಟೆ ಸುಮಾರಿಗೆ ಜಾರ್ಖಂಡ್ ನ ರಾಂಚಿಗೆ ತಲುಪಿ ರೋಡ್ ಶೋ ನಡೆಸಿದರು.
ವಿಮಾನ ನಿಲ್ದಾಣದಿಂದ ರಾಂಚಿಯ ರಾಜಭವನದವರೆಗೆ ೧೦ ಕಿ.ಮೀ ಉದ್ದದ ರೋಡ್ ಶೋ ನಡೆಸಿದರು. ವಿಮಾನ ನಿಲ್ದಾಣದಿಂದ ರಾಜಭವನಕ್ಕೆ ಹೋಗುವ ದಾರಿಯಲ್ಲಿ, ಬಿಜೆಪಿ ಕಾರ್ಯಕರ್ತರು ಪ್ರಧಾನಿ ಮೋದಿಯವರನ್ನು ಸ್ವಾಗತಿಸಲು ವಿವಿಧ ಸ್ಥಳಗಳಲ್ಲಿ ಜಮಾಯಿಸಿದ್ದರು.
ಬಿಜೆಪಿ ಕಾರ್ಯಕರ್ತರು ಡೋಲು ಮತ್ತು ಸಂಗೀತ ವಾದ್ಯಗಳೊಂದಿಗೆ ಪ್ರಧಾನಿ ಅವರನ್ನು ಸ್ವಾಗತಿಸಿದರು. ನರೇಂದ್ರ ಮೋದಿ ಅವರನ್ನು ಕಾಣಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ರಸ್ತೆಯ ಎರಡೂ ಬದಿಗಳಲ್ಲಿ ನಿಂತಿದ್ದರು.
ರೋಡ್ ಶೋ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಹಾದುಹೋದ ಮಾರ್ಗದುದ್ದಕ್ಕೂ ವಿವಿಧ ಸ್ಥಳಗಳಲ್ಲಿ ಹೂಮಳೆ ಸುರಿಸುವ ಮೂಲಕ ಸ್ವಾಗತಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ೧೦ ಕಿ.ಮೀ ರೋಡ್ ಶೋನಲ್ಲಿ ಹಲವಾರು ಸ್ಥಳಗಳಲ್ಲಿ ಕಾರನ್ನು ನಿಲ್ಲಿಸಿ ಬಿಜೆಪಿ ಕಾರ್ಯಕರ್ತರತ್ತ ಕೈ ಬೀಸಿದರು.
ನವೆಂಬರ್ ೧೫ ರಂದು ಪ್ರಧಾನಿ ನರೇಂದ್ರ ಮೋದಿ ಅವರು ಭಗವಾನ್ ಬಿರ್ಸಾ ಮುಂಡಾ ಅವರ ಜಯಂತಿಯಂದು ಗೌರವ ಸಲ್ಲಿಸಲಿದ್ದಾರೆ. ರಾಂಚಿಯ ಭಗವಾನ್ ಬಿರ್ಸಾ ಮುಂಡಾ ಸ್ಮಾರಕ ಉದ್ಯಾನವನ ಮತ್ತು ಸ್ವಾತಂತ್ರ್ಯ ಹೋರಾಟಗಾರ ವಸ್ತುಸಂಗ್ರಹಾಲಯಕ್ಕೂ ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ.