ರಹಾನೆ ಭರ್ಜರಿ ಶತಕ ಕಾಂಗರೂಗಳ ವಿರುದ್ಧ ಭಾರತದ ಮೇಲುಗೈ

India's batsman Ajinkya Rahane (L) celebrates scoring his century (100 runs) as teammate Ravi Jadeja (R) looks on during the second day of the second cricket Test match between Australia and India at the MCG in Melbourne on December 27, 2020. (Photo by WILLIAM WEST / AFP) / --IMAGE RESTRICTED TO EDITORIAL USE - STRICTLY NO COMMERCIAL USE--


ಮೆಲ್ಬೋರ್ನ್, ಡಿ. ೨೭- ನಾಯಕ ಅಜೆಂಕ್ಯಾ ರಹಾನೆ ಭರ್ಜರಿ ಶತಕದ ನೆರವಿನಿಂದ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ೨ನೇ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಭಾರತ ದಿಟ್ಟ ಉತ್ತರ ನೀಡಿದೆ. ೨ನೇ ದಿನದ ಆಟ ಅಂತ್ಯಕ್ಕೆ ಭಾರತ ೫ ವಿಕೆಟ್ ಕಳೆದುಕೊಂಡು ೨೭೭ ರನ್ ಗಳಿಸಿದ್ದು, ಮೊದಲ ಇನ್ನಿಂಗ್ಸ್‌ನಲ್ಲಿ ೮೭ ರನ್ ಮುನ್ನಡೆ ಸಾಧಿಸಿದೆ.
ನಿನ್ನೆ ದಿನದ ಆಟ ಅಂತ್ಯಗೊಂಡಾಗ ಒಂದು ವಿಕೆಟ್ ಕಳೆದುಕೊಂಡು ಭಾರತ ೩೬ ರನ್ ಗಳಿಸಿತ್ತು. ಶುಭಮನ್ ಗಿಲ್ ಹಾಗೂ ಚೇತೇಶ್ವರ ಪೂಜಾರ ಮುನ್ನಡೆಸಿದರು. ಆಸ್ಟ್ರೇಲಿಯಾ ಕ್ಯಾಚ್‌ಗಳನ್ನು ಕೈಚೆಲ್ಲಿದ್ದರಿಂದ ಗಿಲ್‌ಗೆ ವರದಾನವಾಯಿತು. ಆದರೆ ಇದರ ಸಂಪೂರ್ಣ ಪ್ರಯೋಜನ ಪಡೆಯಲು ವಿಫಲರಾದರು.
೬೫ ಎಸೆತಗಳನ್ನು ಎದುರಿಸಿದ ಗಿಲ್ ೮ ಬೌಂಡರಿಗಳಿಂದ ೪೫ ರನ್ ಗಳಿಸಿ, ಪ್ಯಾಟ್ ಕಮಿನ್ಸ್ ಬೌಲಿಂಗ್‌ನಲ್ಲಿ ವಿಕೆಟ್ ಕೀಪರ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ಚೇತೇಶ್ವರ ಪೂಜಾರ ಉತ್ತಮ ಆಟ ಪ್ರದರ್ಶಿಸಲು ವಿಫಲರಾಗಿ ೧೭ ರನ್ ಗಳಿಸಿ, ಕಮಿನ್ಸ್ ಬೌಲಿಂಗ್‌ನಲ್ಲಿ ಔಟಾದರು. ಬಳಿಕ ಜೊತೆಗೂಡಿದ ಅಜೆಂಕ್ಯಾ ರಹಾನೆ ಮತ್ತು ಹನುಮವಿಹಾರಿ ತಂಡವನ್ನು ಮುನ್ನಡೆಸುವ ಪ್ರಯತ್ನ ಮಾಡಿದರು. ಭೋಜನ ವಿರಾಮದ ವೇಳೆಗೆ ಭಾರತ ೩ ವಿಕೆಟ್‌ಗೆ ನಷ್ಟಕ್ಕೆ ೯೦ ರನ್ ಗಳಿಸಿತ್ತು.
ಉತ್ತಮ ಆರಾಮ ಪಡೆದ ಹನುಮವಿಹಾರಿ ಅದರಲ್ಲಿ ಸಫಲವಾಗದೆ ೨೧ ರನ್ ಗಳಿಸಿ ನಿರ್ಗಮಿಸಿದರು. ಈ ಹಂತದಲ್ಲಿ ರಹಾನೆ ಮತ್ತು ವಿಕೆಟ್ ಕೀಪರ್ ರಿಷಬ್‌ಪಂತ್ ಉತ್ತಮ ಜತೆಯಾಟವಾಡಿ ಆಸ್ಟ್ರೇಲಿಯಾ ಬೌಲಿಂಗ್ ದಾಳಿಗೆ ದಿಟ್ಟ ಉತ್ತರ ನೀಡಿದರು.
ಆದರೆ ಆಕ್ರಮಣಕಾರಿ ಆಟವಾಡುತ್ತಿದ್ದ ರಿಷಬ್‌ಪಂತ್‌ಗೆ ಆಸೀಸ್ ವೇಗಿ ಮಿಚಲ್‌ಸ್ಟ್ರಾರ್ಕ್ ಕಡಿವಾಣ ಹಾಕಿದರು. ಮೂರು ಬೌಂಡರಿಗಳ ನೆರವಿನಿಂದ ೨೯ ರನ್ ಗಳಿಸಿದರು. ಈ ವೇಳೆ ಭಾರತ ೫ ವಿಕೆಟ್ ಕಳೆದುಕೊಂಡು ೧೭೩ ರನ್ ಗಳಿಸಿತ್ತು. ಮತ್ತೊಂದೆಡೆ ಉತ್ತಮ ಇನ್ನಿಂಗ್ಸ್ ಕಟ್ಟಲು ಪ್ರಮುಖಪಾತ್ರ ವಹಿಸಿದ ನಾಯಕ ರಹಾನೆ ಅರ್ಧ ಶತಕ ಗಳಿಸಿದರು. ನಾಯಕನಿಗೆ ಆಲ್‌ರೌಂಡರ್ ರವೀಂದ್ರ ಜಡೇಜಾ ಉತ್ತಮ ಸಾಥ್ ನೀಡಿದರು. ಚಹಾ ವಿರಾಮದ ವೇಳೆಗೆ ಭಾರತ ೫ ವಿಕೆಟ್ ಕಳೆದುಕೊಂಡು ೧೮೯ ರನ್ ಗಳಿಸಿತ್ತು. ಈ ಇಬ್ಬರು ಆಟಗಾರರು ಆಸೀಸ್ ಬೌಲಿಂಗ್ ದಾಳಿಗೆ ದಿಟ್ಟ ಉತ್ತರ ನೀಡಿದರು. ಒಂದೆಡೆ ಇನ್ನಿಂಗ್ಸ್ ಕಟ್ಟಿದ ರಹಾನೆ, ಮತ್ತೊಂದೆಡೆ ಜಡೇಜಾ ತಾಳ್ಮೆಯಾಟ ಪ್ರದರ್ಶಿಸಿದರು. ಬೌಲರ್‌ಗಳಿಗೆ ಬೆವರಿಳಿಸಿದ ರಹಾನೆ, ಟೆಸ್ಟ್ ಕ್ರಿಕೆಟ್‌ನಲ್ಲಿ ೧೨ನೇ ಶತಕ ಸಿಡಿಸಿದರು. ಆಸೀಸ್ ನೆಲದಲ್ಲಿ ಶತಕ ಬಾರಿಸಿದ ಭಾರತದ ಕೆಲವೇ ಕೆಲವು ನಾಯಕರುಗಳ ಪಟ್ಟಿಗೆ ಸೇರ್ಪಡೆಯಾದರು.
೨೦೦ ಎಸೆತಗನ್ನು ಎದುರಿಸಿದ ರಹಾನೆ ೧೨ ಬೌಂಡರಿಗಳ ನೆರವಿನಿಂದ ಅಜೇಯ ೧೦೪ ರನ್ ಗಳಿಸಿದ್ದಾರೆ. ಮತ್ತೊಂದೆಡೆ ಜಡೇಜಾ ಅವರು ೪೦ ರನ್ ಗಳಿಸಿ ಆಡುತ್ತಿದ್ದಾರೆ.
ಕೊನೇ ಕ್ಷಣದಲ್ಲಿ ಮಳೆ ಸುರಿದ ಕಾರಣ ೨ನೇ ದಿನದ ಆಟವನ್ನು ಅವಧಿಗೆ ಮುನ್ನವೇ ಅಂತ್ಯಗೊಳಿಸಲಾಯಿತು. ದಿನದಾಟದ ಅಂತ್ಯಕ್ಕೆ ಭಾರತ ೫ ವಿಕೆಟ್ ನಷ್ಟಕ್ಕೆ ೨೭೭ ರನ್ ಗಳಿಸಿ ಹಿಡಿತ ಸಾಧಿಸಿದೆ. ಮಿಚೆಲ್‌ಸ್ಟ್ರಾರ್ಕ್ ಹಾಗೂ ಫ್ಯಾಟ್ ಕಮಿನ್ಸ್ ತಲಾ ೨ ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು.