ರಹಸ್ಯ ಮಾಹಿತಿ ಸೋರಿಕೆ ಅಮೆರಿಕ ತೇಪೆ

ನ್ಯೂಯಾರ್ಕ್, ಏ.೧೨- ಪೆಂಟಗಾನ್‌ನ ರಹಸ್ಯ ಮಾಹಿತಿ ಸೋರಿಕೆ ಯಿಂದ ಈಗಾಗಲೇ ವೈರಿರಾಷ್ಟ್ರಗಳ ಎದುರು ನಗೆಪಾಟಗೀಡಾಗಿರುವ ಅಮೆರಿಕಾ ಇದೀಗ ತನ್ನ ಪ್ರಮಾದಕ್ಕೆ ತೇಪೆ ಹಚ್ಚುವ ಕಾರ್ಯಕ್ಕೆ ಮುಂದಾಗಿದೆ. ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಆಂಥನಿ ಬ್ಲಿಂಕೆನ್ ಹಾಗೂ ರಕ್ಷಣಾ ಸಚಿವ ಲಾಯ್ಡ್ ಆಸ್ಟಿನ್ ಅವರು ಇದೀಗ ಉಕ್ರೇನ್‌ನ ಸಚಿವರ ಜೊತೆ ಮಾತುಕತೆ ನಡೆಸಿದ್ದಾರೆ.
ವಾಷಿಂಗ್ಟನ್ ಡಿಸಿ ಕರೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಬ್ಲಿಂಕೆನ್ ಹಾಗೂ ಆಸ್ಟಿನ್ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬ್ಲಿಂಕೆನ್, ಗುಪ್ತಚರವನ್ನು ಕಾಪಾಡುವ ನಮ್ಮ ಸ್ವಂತ ಬದ್ಧತೆಯ ಬಗ್ಗೆ ಅವರಿಗೆ ಭರವಸೆ ನೀಡುವುದು ಸೇರಿದಂತೆ ಕಳೆದ ದಿನಗಳಲ್ಲಿ ನಾವು ಉನ್ನತ ಮಟ್ಟದಲ್ಲಿ ಮಿತ್ರರಾಷ್ಟ್ರಗಳು ಮತ್ತು ಪಾಲುದಾರರೊಂದಿಗೆ ಮಾತುಕತೆಯಲ್ಲಿ ತೊಡಗಿಸಿಕೊಂಡಿದ್ದೇವೆ. ಉಕ್ರೇನ್‌ನ ವಿದೇಶಾಂಗ ಸಚಿವ ಡಿಮಿತ್ರೊ ಕುಲೆಬಾ ಜೊತೆ ಮಾತನಾಡಿದ್ದು, ಈ ವೇಳೆ ಉಕ್ರೇನ್ ಮತ್ತು ಅದರ ಪ್ರಾದೇಶಿಕ ಸಮಗ್ರತೆ, ಅದರ ಸಾರ್ವಭೌಮತ್ವ, ಅದರ ಸ್ವಾತಂತ್ರ್ಯವನ್ನು ರಕ್ಷಿಸುವ ಬಗ್ಗೆ ಬೆಂಬಲವನ್ನು ನಿರಂತರವಾಗಿ ಮುಂದುವರೆಸುವ ಭರವಸೆ ನೀಡಿದ್ದೇನೆ. ಇದೇ ವೇಳೆ ಮಾತನಾಡಿದ ಲಾಯ್ಡ್ ಆಸ್ಟಿನ್, ನಾನು ಕೂಡ ಉಕ್ರೇನ್ ರಕ್ಷಣಾ ಸಚಿವ ಒಲೆಕ್ಸಿ ರೆಜ್ನಿಕೋವ್ ಜೊತೆ ಮಾತುಕತೆ ನಡೆಸಿದ್ದೇನೆ. ಒಲೆಕ್ಸಿ ಹಾಗೂ ಉಕ್ರೇನ್ ನಾಯಕತ್ವವು ಸದ್ಯದ ಯುದ್ದದ ಬಗ್ಗೆ ಹೆಚ್ಚಿನ ಗಮನ ಹರಿಸಿದೆ. ಅವರು ಯಶಸ್ವಿಯಾಗಿ ಮುಂದುವರಿಯಲು ಅಗತ್ಯವಿರುವ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ರಹಸ್ಯ ಮಾಹಿತಿಗಳ ಸೋರಿಕೆಯಿಂದ ಅಮೆರಿಕಾಗೆ ಬಗ್ಗೆ ಈ ಹಿಂದೆ ಮಿತ್ರರಾಷ್ಟ್ರಗಳು ಇಟ್ಟಿದ್ದ ನಂಬಿಕೆಗೆ ಭಾರೀ ಧಕ್ಕೆ ತಂದಿದೆ ಎನ್ನಲಾಗಿದೆ. ರಷ್ಯಾದ ಪ್ರಬಲ ದಾಳಿಗೆ ಮುಂದೊಂದು ದಿನ ಉಕ್ರೇನ್ ಸಂಪೂರ್ಣ ಶರಣಾಗಬಹುದು ಎಂಬ ಅಮೆರಿಕಾದ ಆತಂಕ ಕೂಡ ಸೋರಿಕೆಯಾದ ರಹಸ್ಯ ಮಾಹಿತಿಯಲ್ಲಿದೆ. ಅದೂ ಅಲ್ಲದೆ ಚೀನಾ, ಉತ್ತರ ಕೊರಿಯಾ ಸೇರಿದಂತೆ ಯುದ್ದದ ಮಾಹಿತಿ ಕೂಡ ಸೋರಿಕೆಯಾಗಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಅಮೆರಿಕಾ ಸೇನಾ ಅಧಿಕಾರಿಗಳ ಬೇಜಾಬ್ದಾರಿಯುತ ವರ್ತನೆಯಿಂದ ಇದೀಗ ಮಿತ್ರರಾಷ್ಟ್ರಗಳು ಇಕ್ಕಟ್ಟಿನಲ್ಲಿ ಸಿಲುಕಿದಂತಾಗಿದೆ.