ರಸ್ತೆ ಹಾಳು ಕೇಳುವವರಿಲ್ಲ ಜನರ ಗೋಳು

ದೇವದುರ್ಗ.ಅ.೩೦- ತಾಲೂಕಿನ ಗಲಗ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಗಲಗ-ಅಮರಾಪುರ ಕ್ರಾಸ್ ೧೪ಕಿಮೀ ರಸ್ತೆ ಬಹುತೇಕ ಹಾಳಾಗಿದ್ದು, ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ.
ರಸ್ತೆಯ ಉದ್ದಕ್ಕೂ ಗುಂಡಿಗಳು ಬಿದ್ದಿದ್ದು, ನಡುವೆ ಬರುವ ಮುಂಡರಗಿ, ದೇವತಗಲ್, ಗಣಜಿಲಿ ಗ್ರಾಮದೊಳಗಿನ ರಸ್ತೆಗಳು ಬಹುತೇಕ ಕೆಸರು ಗದ್ದೆಯಂತಾಗಿವೆ. ಚರಂಡಿ ಹಾಗೂ ಮಳೆ ನೀರು ಹರಿದು, ರಸ್ತೆಗಳು ಹಾಳಾಗಿದ್ದು, ಪಾದಚಾರಿಗಳು ಸೇರಿ ಪ್ರಯಾಣಿಕರು ಓಡಾಟಕ್ಕೆ ಸರ್ಕಸ್ ಮಾಡಬೇಕಿದೆ.
ಅಮರಾಪುರ ಕ್ರಾಸ್‌ನಿಂದ ಗಲಗ ಮೂಲಕ ಚಿಂಚರಕಿವರೆಗೆ ರಸ್ತೆ ಅಭಿವೃದ್ಧಿಗೆ ಮೂರು ವರ್ಷಗಳ ಹಿಂದೆ ರಾಜ್ಯ ಸರ್ಕಾರ ಅನುದಾನ ಮಂಜೂರು ಮಾಡಿದೆ. ಆದರೆ, ಚಿಂಚರಕಿ ಕ್ರಾಸ್‌ನಿಂದ ಗಲಗವರೆಗೆ ೮ಕಿಮೀವರೆಗೆ ಮಾತ್ರ ಡಾಂಬರೀಕರಣ ಕಾಮಗಾರಿ ಕೈಗೊಂಡಿದ್ದು, ಉಳಿದ ೧೪ಕಿಮೀ ಕಾಮಗಾರಿಯನ್ನು ಕೇಂದ್ರದ ಪರಿಹಾರ ನಿಧಿಯಲ್ಲಿ ನಿರ್ಮಿಸಲು ಮಂಜೂರಾತಿ ಸಿಕ್ಕಿದೆ ಎಂದು ಕಾರಣ ಹೇಳಿ ಕಾಮಗಾರಿ ಸ್ಥಗಿತಗೊಳಿಸಿದ್ದಾರೆ.
ಮುಂಡರಗಿ ಶ್ರೀಶಿವರಾಜ ದೇವಸ್ಥಾನ ಹಾಗೂ ಗಲಗನ ಶ್ರೀಚನ್ನಬಸವೇಶ್ವರ ದೇವಸ್ಥಾನ, ಯಲ್ಲಮ್ಮ ದೇವಸ್ಥಾನಕ್ಕೆ ಭಕ್ತರು ಇದೇ ಮಾರ್ಗದ ಮೂಲಕ ತೆರಳಬೇಕಿದೆ. ಮುಂಡರಗಿಯಲ್ಲಿ ಸಿಸಿ ರಸ್ತೆ ನಿರ್ಮಿಸಿದ್ದು, ಸಂಪೂರ್ಣ ಕಿತ್ತಿದ್ದು, ಗುಂಡಿಗಳು ನಿರ್ಮಾಣವಾಗಿವೆ. ಈ ಮಾರ್ಗದಲ್ಲಿ ಎರಡು ಹಳ್ಳಗಳು ಬರುತ್ತಿದ್ದು, ಸೂಕ್ತ ಸಂಪರ್ಕ ಕಲ್ಪಿಸಿಲ್ಲ.
ದೇವತಗಲ್ ಹಾಗೂ ಗಣಜಿಲಿ ಗ್ರಾಮದಲ್ಲಿ ಚರಂಡಿ ಹಾಗೂ ಹಳ್ಳದ ನೀರು ನಿಂತು ರಸ್ತೆ ಹಾಳಾಗಿದ್ದರೆ, ರಸ್ತೆಯ ಎರಡೂ ಮಾರ್ಗಕ್ಕೆ ತಿಪ್ಪೆಗುಂಡಿ, ಕಲ್ಲುಹಾಕಿದ್ದರಿಂದ ರಸ್ತೆ ಕಿರಿದಾಗಿದೆ. ಕೆಲವರು ರಸ್ತೆ ಅತಿಕ್ರಮಿಸಿಕೊಂಡ ಕಾರಣ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಇದರಿಂದ ಆಗಾಗ ಅಪಘಾತಗಳು ಸಂಭವಿಸುತ್ತಿವೆ. ಕೂಡಲೇ ರಸ್ತೆ ಅಭಿವೃದ್ಧಿ ಮಾಡಿ ಜನರಿಗೆ ಅನುಕೂಲ ಕಲ್ಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.