ರಸ್ತೆ ಸುರಕ್ಷತಾ ಜಾಗೃತಿಗಾಗಿ ಓಟ ಆಯೋಜನೆ: ಎಸ್ಪಿ. ಚನ್ನಬಸವಣ್ಣ ಎಸ್.ಎಸ್

ಬೀದರ, ಆ.10: ಜಿಲ್ಲೆಯ ಸಾರ್ವಜನಿಕರಿಗೆ ರಸ್ತೆ ಸುರಕ್ಷತೆಯ ಅರಿವು ಮೂಡಿಸುವ ಉದ್ದೇಶದಿಂದ ಜಿಲ್ಲೆಯ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಅಗಸ್ಟ 27 ರಂದು ರಸ್ತೆ ಸುರಕ್ಷತಾ ಜಾಗೃತಿ ಓಟವನ್ನು ಆಯೋಜಿಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಚನ್ನಬಸವಣ್ಣ.ಎಸ್.ಎಲ್ ಹೇಳಿದರು.

ಅವರು ಬುಧವಾರ ಬೀದರ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿಗಳ ಕಛೇರಿ ಆವರಣದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಬೀದರ ಜಿಲ್ಲೆಯಲ್ಲಿ 2022ನೇ ಸಾಲೀನಲ್ಲಿ 332 ಹಾಗೂ 2023ನೇ ಸಾಲೀನಲ್ಲಿ 201 ಜನ ರಸ್ತೆ ಅಪಘಾತದಲ್ಲಿ ಸಾವನಪ್ಪಿದ್ದಾರೆ ಇವರ ಸಾವಿರಗೆ ಕಾರಣ ಕೆದಕಿದರೆ ಇವರು ಹೆಲ್ಮೆಟ್ ಹಾಗೂ ಸೀಟ್ ಬೆಲ್ಟ್ ಹಾಕದೆ ಇರುವುದು ಮುಖ್ಯ ಕಾರಣ ಎಂದು ತಿಳಿದು ಬಂದಿದ್ದು ಈ ಹಿನ್ನೆಲೆಯಲ್ಲಿ ರಸ್ತೆ ಸುರಕ್ಷತಾ ಜಾಗೃತಿ ಓಟದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ನಿರ್ಧರಿಸಲಾಗಿದೆ ಎಂದರು.

ರಸ್ತೆ ಸುರಕ್ಷತಾ ಜಾಗೃತಿ ಓಟವು ಅಗಸ್ಟ 27 ರಂದು ಬೆಳಿಗ್ಗೆ 5 ಗಂಟೆಗೆ ಬೀದರನ ಐತಿಹಾಸಿಕೆ ಕೋಟೆಯಿಂದ ಪ್ರಾರಂಭವಾಗಿ ನಗರದ ಪ್ರಮುಖ ಬೀದಿಗಳಿಂದ ಸಾಗಿ ಪುನ: ಕೋಟೆಗೆ ಬಂದು ಸೇರಲಿದೆ. ಓಟದಲ್ಲಿ 10 ಕಿ.ಮಿ., 5 ಕಿ.ಮಿ, ಹಾಗೂ 2.5 ಕಿ.ಮಿನ ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಈ ಓಟದಲ್ಲಿ ಭಾಗವಹಿಸ ಬಯಸುವವರು ಕ್ಯೂ.ಆರ್ ಕೊಡ್ ಸ್ಕಾನ್ ಮಾಡಿ ನಿಗದಿತ ಮಾಹಿತಿಗಳಾದ ಟಿ-ಶರ್ಟ್ ಸೈಜ್, ಆರೋಗ್ಯದ ಗುಣಮಟ್ಟ ಸೇರಿದಂತೆ ವಿವಿಧ ಮಾಹಿತಿ ನೀಡುವ ಮೂಲಕ ಸಾರ್ವಜನಿಕರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಸದರಿ ಕ್ಯೂ..ಆರ್ ಕೊಡಗಳನ್ನು ನಗರದ ಪ್ರಮುಖ 10 ಸಾರ್ವಜನಿಕರ ಸ್ಥಗಳಲ್ಲಿ ಅಳವಡಿಸಲಾಗುವುದು ಎಂದರು.

ಈ ಓಟದಲ್ಲಿ ಶಾಲಾ-ಕಾಲೇಜಿನ ಮಕ್ಕಳು, ಎನ್.ಎನ್.ಸಿ ಕೆಡೇಟ್‍ಗಳು, ಸಂಘ ಸಂಸ್ಥೆಗಳ ಸದಸ್ಯರು, ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಸೇರಿ ಒಟ್ಟು 3000 ಸಾವಿರ ಜನರು ಭಾಗವಹಿಸಲಿದ್ದಾರೆ. ಓಟದಲ್ಲಿ ಭಾಗವಹಿಸಲು ನೊಂದಣಿ ಮಾಡದವರಿಗೆ ಅಗಸ್ಟ್ 26 ರಂದು ಮಂಗಲ್ ಪೇಟ್‍ದಲ್ಲಿರುವ ಪೊಲೀಸ್ ಕಲ್ಯಾಣ ಮಂಟಪದಲ್ಲಿ ಟಿ-ಶರ್ಟ್ ಹಾಗೂ ಕ್ಯಾಪ್ ನೀಡಲಾಗುವುದು. ಓಟವನ್ನು ಮೊದಲು ಮುಗಿಸುವ ಮೂರು ಜನರಿಗೆ ವಿಶೇಷ ಮೆಡಲ್ ಪ್ರಧಾನ ಮಾಡಲಾಗುವುದು. ಈ ಓಟದಲ್ಲಿ ಮಾಧ್ಯಮದವರು ಸಹ ಭಾಗವಹಿಸುವಂತೆ ಅವರು ಕೋರಿದರು.

ಓಟದ ಭಾಗವಹಿಸುವವರಿಗೆ ಟೀ-ಶರ್ಟ್, ಕ್ಯಾಪ್, ಮೆಡಲ್, ಟಿಫೀನ್ ವ್ಯವಸ್ಥೆಗೆ ಜಿಲ್ಲೆಯ ಸಂಘ ಸಂಸ್ಥೆಗಳ ಮುಖ್ಯಸ್ಥರು ಸಹಕಾರ ನೀಡುತ್ತಿದ್ದಾರೆ ಆದರಿಂದ ಧರಿನಾಡು ಬೀದರ ಜನರು ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಿ ಹಾಗೂ ರಸ್ತೆ ಸುರಕ್ಷತಾ ಜಾಗೃತಿ ಓಟದಲ್ಲಿ ಭಾಗವಹಿಸಿ ಇದನ್ನು ಯಶಸ್ವಿಗೊಳಿಸಬೇಕೆಂದರು.

ಬೀದರ ಗಾಂಧಿ ಗಂಜ ಪೊಲೀಸ್ ಠಾಣೆಯಲ್ಲಿ ದಾಖಲಾದ 4 ದೊಂಬಿ, 5 ಸುಲಿಗೆ, 4 ಕೊಲೆಯತ್ನ ಹಾಗೂ ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಧಿಸಿದಂತೆ ಆರೋಪಿಗಳು ಚಿದ್ರಿ ಬಳಿ ಇದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಮೇ 03 ರಂದು ಬೀದರ ಗ್ರಾಮೀಣ ಸಿಪಿಐ ಮಲ್ಲಿಕಾರ್ಜುನ ಯಾತನೂರ ನೇತೃತ್ವ ತಂಡ ಆರೋಪಿಗಳನ್ನು ಬಂಧಿಸಲು ತೆರಳಿದಾಗ ಒಬ್ಬ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು ಇದರಲ್ಲಿ ಒಬ್ಬ ಆರೋಪಿ ಪಾರಾರಿಯಾಗಿದ್ದ ಆತನಿಗಾಗಿ ಬಲೆ ಬಿಸಿದ ಪೊಲೀಸರು ಕೊನೆಗೆ ಮಹರಾಷ್ಟ್ರದ ನಾಗಪೂರ ಬಳಿ ಅವನಿಗೆ ಅಗಸ್ಟ್ 7 ರಂದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.

ಜುಲೈ 30 ರಂದು ಬೀದರನ ನೌಬಾದ ಬಳಿಯ ಜೈಭೀಮ ನಗರದ ಮನೆಯ ಮುಂದಿನ ಜಾನುವಾರು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಸ್‍ಐ ತಸ್ಲೀಂ ಸುಲ್ತಾನಾ ಹಾಗೂ ಸಿಬ್ಬಂದಿಗಳ ನೇತೃತ್ವದ ತಂಡ ಖಚಿತ ಮಾಹಿತಿಯ ಮೇರೆಗೆ ಅಗಸ್ಟ್ 8 ರಂದು ಓರ್ವ ಆರೋಪಿಯನ್ನು ಬಂಧಿಸಿ ವಿಚಾರಣೆ ಮಾಡಲಾಗಿ ಆರೋಪಿಯು ನೌಬಾದ ಬಳಿಯಿಂದ ನಾಲ್ಕು ಜಾನುವಾರುಗಳನ್ನು ಕಳುವು ಮಾಡಿ ಮೈಲಾರದ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ದಾನೆ ಎಂದು ತಿಳಿದು ಬಂದಿದೆ ಆರೋಪಿತನಿಂದ 70 ಸಾವಿರ ರೂ. ನಗದು ಹಣ, ಜಾನುವಾರು ಸಾಗಿಸಲು ಬಳಸಿದ 4 ಲಕ್ಷ ಮೌಲ್ಯದ ಎರಡು ಗೂಡ್ಸ್ ಆಟೋಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಹೇಳಿದರು.

ಕಾರ್ಯಾಚರಣೆಯಲ್ಲಿ ಭಾಗವಹಿಸಿ ಉತ್ತಮ ಕಾರ್ಯನಿರ್ವಹಿಸಿದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ 10 ಸಾವಿರ ನಗದು ಹಾಗೂ ಪ್ರಶಂಸನ ಪತ್ರಗಳನ್ನು ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿಗಳು ವಿತರಿಸಿದರು.

ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ ಅಧೀಕ್ಷಕ ಮಹೇಶ ಮೇಘಣ್ಣನವರ, ಪೊಲೀಸ್ ನಿರೀಕ್ಷಕ ವೆಂಕಟೇಶ.ಕೆ.ಯಡಹಳ್ಳಿ, ಸಿಪಿಐ ಮಲ್ಲಿಕಾರ್ಜುನ ಯಾತನೂರ, ಪಿಎಸ್‍ಐ ತಸ್ಲೀಂ ಸುಲ್ತಾನಾ, ಪೋಲಿಸ ಇಲಾಖೆಯ ಇತರೆ ಅಧಿಕಾರಿ ಸಿಬ್ಬಂದಿಗಳು ಸೇರಿದಂತೆ ಬೀದರ ಜಿಲ್ಲೆ ವಿವಿಧ ಸಂಘ-ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.