ರಸ್ತೆ ಸರಿಪಡಿಸಿ- ಹೈ ಕೋರ್ಟ್ ಸೂಚನೆ

ಬೆಂಗಳೂರು, ಮೇ.೨೯-ನಗರದೆಲ್ಲೆಡೆ ರಸ್ತೆ ಗುಂಡಿಗಳನ್ನು ಮುಚ್ಚುವ ಕುರಿತು ಉಂಟಾಗಿರುವ ಲೋಪಗಳನ್ನು ಸರಿಪಡಿಸಿಕೊಳ್ಳುವಂತೆ ಬಿಬಿಎಂಪಿಗೆ ಹೈಕೋರ್ಟ್ ಸೂಚಿಸಿದೆ.
ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠವೂ ನಗರದ ರಸ್ತೆಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಲು ಬಿಬಿಎಂಪಿ ಹಾಗೂ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆ ನಡೆಸಿತು.
ಈ ಸಂದರ್ಭದಲ್ಲಿ ವಾದ ಮಂಡಿಸಿದ ಬಿಬಿಎಂಪಿ ಪರ ವಕೀಲ ಕೆ.ಎನ್.ಪುಟ್ಟೇಗೌಡ, ಪಾಲಿಕೆಯ ಬಹುತೇಕ ಅಧಿಕಾರಿಗಳು ಮತ್ತು ಸಿಬ್ಬಂದಿ ಕೋವಿಡ್ ಕರ್ತವ್ಯದಲ್ಲಿದ್ದಾರೆ. ಹೀಗಾಗಿ, ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಶಿಫಾರಸುಗಳನ್ನು ಅಳವಡಿಸಿಕೊಂಡಿರುವ ಮಾಹಿತಿ ಲಭ್ಯವಾಗುತ್ತಿಲ್ಲ. ಈ ಬಗ್ಗೆ ತಿಳಿಸಲು ಸ್ವಲ್ಪ ಕಾಲಾವಕಾಶ ನೀಡುವಂತೆ ಮನವಿ ಮಾಡಿದರು.
ಬಳಿಕ ಅರ್ಜಿದಾರರ ಪರ ವಕೀಲೆ ಅನುರಾಧ ವಾದಿಸಿ, ರಸ್ತೆ ಗುಂಡಿಗಳ ಸಂಬಂಧ ವಸ್ತುಸ್ಥಿತಿ ಪರಿಶೀಲಿಸಿ ಕಾನೂನು ಸೇವಾ ಪ್ರಾಧಿಕಾರ ನೀಡಿದ ವರದಿಗೆ ಪಾಲಿಕೆ ಉತ್ತರ ನೀಡಬೇಕಿತ್ತು. ಆದರೆ, ಈವರೆಗೆ ನೀಡಿಲ್ಲ. ಇನ್ನು ಮುಂದಾದರೂ ಸಮಿತಿ ಪಟ್ಟಿ ಮಾಡಿರುವ ಲೋಪಗಳನ್ನು ಸರಿಪಡಿಸಿಕೊಳ್ಳಲು ಪಾಲಿಕೆಗೆ ನಿರ್ದೇಶನ ನೀಡಬೇಕು ಎಂದರು.
ತದನಂತರ ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಕಾನೂನು ಸೇವಾ ಪ್ರಾಧಿಕಾರ ಕಾಮಗಾರಿಗಳಲ್ಲಿ ಆಗುತ್ತಿರುವ ಲೋಪಗಳನ್ನು ಪಟ್ಟಿ ಮಾಡಿ, ಅವುಗಳನ್ನು ಸರಿಪಡಿಸಿಕೊಳ್ಳಲು ಕೆಲವು ಶಿಫಾರಸುಗಳನ್ನು ಮಾಡಿದೆ. ಅವುಗಳನ್ನು ಪಾಲಿಸಿ ಎಂದು ಸೂಚನೆ ನೀಡಿತು.