ರಸ್ತೆ ಸರಿಪಡಿಸಲು ಆಗ್ರಹ


ಲಕ್ಷ್ಮೇಶ್ವರ, ಅ 1: ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಕೊನೆಯ ಗ್ರಾಮವಾದ ಬಾಲೆ ಹೊಸೂರು ಗ್ರಾಮದ ಗ್ರಾಮಸ್ಥರು ತಾಲೂಕು ಕೇಂದ್ರ ಸ್ಥಳವಾದ ಲಕ್ಷ್ಮೇಶ್ವರ ತಲುಪಲು, ಜಿಲ್ಲಾ ಕೇಂದ್ರವಾದ ಗದಗ ತಲುಪಲು ಹರಸಾಹಸ ಮಾಡಬೇಕಾದ ದಯನೀಯ ಸ್ಥಿತಿ ನಿರ್ಮಾಣವಾಗಿದೆ.
ಬಾಲೆ ಹೊಸೂರಿನಿಂದ ಲಕ್ಷ್ಮೇಶ್ವರ ತಲುಪಲು ಇರುವ ಏಕೈಕ ರಸ್ತೆ ಸಂಬಂಧಪಟ್ಟ ಇಲಾಖೆಯ ದಿವ್ಯ ನಿರ್ಲಕ್ಷದಿಂದಾಗಿ ಇಡೀ ರಸ್ತೆ ಹದಗೆಟ್ಟು ಗುಂಡಿಮಯವಾಗಿದ್ದು ಇಲ್ಲಿ ಸಂಚರಿಸುವವರು ಪ್ರಾಣವನ್ನು ಕೈಯ್ಯಲ್ಲಿ ಹಿಡಿದುಕೊಂಡು ಬರಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಈಗಾಗಲೇ ಈ ಗ್ರಾಮದ ಗ್ರಾಮಸ್ಥರು ಗ್ರಾಮ ಅಭಿವೃದ್ಧಿ ಹೋರಾಟ ಸಮಿತಿಯನ್ನು ರಚಿಸಿಕೊಂಡು ಮನವಿಯನ್ನು ಸಹ ಸಲ್ಲಿಸಿದ್ದು, ಆದರೆ ಇದುವರೆಗೂ ಸಂಬಂಧಪಟ್ಟ ಅಧಿಕಾರಿಗಳು ಸ್ಪಂದಿಸದಿರುವುದು ಗ್ರಾಮಸ್ಥರ ಸೈರಣೆಯನ್ನು ಕೆಣಕಿದೆ.
ಈಗ ಕೊನೆಯ ಹಂತವಾಗಿ 10ನೇ ತಾರೀಖು ನೀಡಿರುವ ಗ್ರಾಮಸ್ಥರು ಬಾಲೆಹೊಸೂರು ಸೂರಣಗಿ ಮಧ್ಯದ ರಸ್ತೆಯಲ್ಲಿನ ಗುಂಡಿಗಳಿಗೆ ಕಲ್ಲು ಮಣ್ಣುಗಳನ್ನಾದರೂ ತುಂಬಿ ಜನ ವಾಹನ ಸಂಚಾರ ಮಾಡಲು ಅನುಕೂಲ ಮಾಡಿಕೊಡಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.
ಗ್ರಾಮಸ್ಥರು ಸೌಲಭ್ಯಗಳ ಕೊರತೆಯಿಂದ ರೋಸಿ ಹೋಗಿದ್ದಾರೆ. ಕೇವಲ 3 ಕಿ.ಮೀ ಅಂತರದಲ್ಲಿರುವ ಹಾವೇರಿ ಜಿಲ್ಲೆಯ ರಸ್ತೆಗಳು ಸುಸ್ಥಿತಿಯಲ್ಲಿದ್ದರೆ ನಮ್ಮ ಜಿಲ್ಲೆಯ ಕೊನೆಯ ಹಳ್ಳಿಯಾದ ಈ ರಸ್ತೆಯ ಸ್ಥಿತಿ ಹೀಗೇಕಿದೆ ಎಂದು ಅಲವತ್ತುಕೊಳ್ಳುತ್ತಿದ್ದಾರೆ.