ರಸ್ತೆ ಸಂಪರ್ಕ ಕಡಿತ:ಹಳ್ಳದ ಪ್ರವಾಹಕ್ಕೆ ಕೊಚ್ಚಿ ಹೋದ ಸೇತುವೆ

ಮುದ್ದೇಬಿಹಾಳ : ಸೆ.8:ಮಂಗಳವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ತಾಲೂಕಿನ ಅಡವಿ ಹುಲಗಬಾಳದಿಂದ ಅಡವಿ ಹುಲಗಬಾಳ ತಾಂಡಾ ಸಂಪರ್ಕಿಸುವ ಸೇತುವೆ ಕೊಚ್ಚಿ ಹೋಗಿರುವ ಘಟನೆ ಬುಧವಾರ ಬೆಳಕಿಗೆ ಬಂದಿದೆ.ಏತನ್ಮಧ್ಯೆ ತಾಂಡಾದ ಜನರು ಅಡವಿ ಹುಲಗಬಾಳ ಗ್ರಾಮಕ್ಕೆ ಬರಲು ಸಂಪರ್ಕ ಕಡಿತವಾಗಿದೆÉ.ಕಳೆದ ವರ್ಷ ಈ ಸೇತುವೆಯನ್ನು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಜಿಪಂ ವಿಭಾಗದ ಅಧಿಕಾರಿಗಳು ದುರಸ್ತಿ ಮಾಡಿಸಿದ್ದರು.ದೊಡ್ಡ ಕೊಳವೆ ಪೈಪ್‍ಗಳನ್ನು ಹಾಕಿ ರೂಲರ್ ಆಡಿಸಿ ಜನರ ಓಡಾಟಕ್ಕೆ ವ್ಯವಸ್ಥೆ ಕಲ್ಪಿಸಿದ್ದರು.ವಿಶೇಷ ಎಂದರೆ ಪ್ರತಿ ವರ್ಷ ದೀಪಾವಳಿ ಪಾಡ್ಯದ ದಿನದಂದು ಜಿಪಂ ಮಾಜಿ ಸದಸ್ಯ ನಿಂಗಪ್ಪಗೌಡ ಬಪ್ಪರಗಿ ಅವರು ನಡೆಸಿಕೊಡುವ ಸಾಮೂಹಿಕ ವಿವಾಹ,ಸಿಡಿಯಾನ ದ್ಯಾಮವ್ವ ದೇವಿ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವಕ್ಕೆ ಇದೇ ರಸ್ತೆ ಮಾರ್ಗವಾಗಿ ಭಕ್ತಾದಿಗಳು,ಜನರು ತೆರಳುತ್ತಿದ್ದರು.ಇದೀಗ ಇದೇ ಸೇತುವೆ ನೀರಲ್ಲಿ ಕೊಚ್ಚಿ ಹೋಗಿದ್ದರಿಂದ ರಸ್ತೆ ಸಂಪರ್ಕ ಕಡಿತಗೊಂಡಿದೆ.ಇನ್ನುಳಿದಂತೆ ತಾಲೂಕಿನ ಯರಝರಿ ಗ್ರಾಮದಲ್ಲಿ ಹಳ್ಳ ಉಕ್ಕೇರಿ ಹರಿದಿದ್ದರಿಂದ ನೀರು ಗ್ರಾಮದೊಳಕ್ಕೆ ನುಗ್ಗಿದೆ.ಗ್ರಾಮದ ಹಲವು ಮನೆಗಳಿಗೆ ನೀರು ನುಗ್ಗಿದ್ದರಿಂದ ನಿವಾಸಿಗಳು ನೀರು ಹೊರ ಹಾಲು ಹರಸಾಹಸ ಪಟ್ಟರು.

ಯರಝರಿ ಗ್ರಾಮದ ಹುಲ್ಲಣ್ಣ ಮ್ಯಾಗೇರಿ,ಯಮನಪ್ಪ ಕೋಳೂರ,ಎಂ.ಡಿ.ಚಪ್ಪರಬಂದ ಮಾತನಾಡಿ,ಗ್ರಾಮದ ಸಮೀಪದಲ್ಲಿರುವ ಹಳ್ಳದ ನೀರು ಊರೊಳಕ್ಕೆ ನುಗ್ಗಿದೆ.ಅಂದಾಜು 15-20 ಮನೆಗಳಿಗೆ ನೀರು ಹೋಗಿದೆ.ದಿನವೀಡಿ ಮಕ್ಕಳು,ಮಹಿಳೆಯರು,ವೃದ್ಧರು ಬಿಡುವಿಲ್ಲದೇ ಮನೆಯೊಳಗೆ ಬಂದ ನೀರನ್ನು ಹೊರ ಹಾಕುವುದರಲ್ಲಿಯೇ ನಿರತವಾಗಿದ್ದಾರೆ.ಮಾದಿನಾಳ ಕ್ರಾಸ್‍ಗೆ ಹೋಗುವ ದಾರಿಯಲ್ಲಿರುವ ಊರಿನ ಸೇತುವೆಯನ್ನು ಎತ್ತರಿಸಬೇಕು.ಸ್ಮಶಾನದ ಸುತ್ತಮುತ್ತಲೂ ಹಳ್ಳದ ಅಕ್ಕಪಕ್ಕದಲ್ಲಿ ಬೆಳೆದಿರುವ ಮುಳ್ಳು ಕಂಟಿಗಳನ್ನು ತೆರವುಗೊಳಿಸುವ ಕಾರ್ಯ ಮಾಡಬೇಕು ಎಂದು ಆಗ್ರಹಿಸಿದರು.

ತಾಲೂಕಿನ ಬಸರಕೋಡ ಸಿದ್ದಾಪೂರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಹಳ್ಳವು ತುಂಬಿ ಬಂದಿದ್ದರಿಂದ ಜನರ ಓಡಾಟಕ್ಕೆ ತೊಂದರೆಯಾಯಿತು.ಇಂಗಳಗೇರಿ-ಗುಡ್ನಾಳ ಗ್ರಾಮಕ್ಕೆ ಹೋಗುವ ಸೇತುವೆ ಮೇಲೆ ನೀರು ಬಂದಿದ್ದರಿಂದ ರೈತರು ಅಳವಡಿಸಿದ್ದ ಹಳ್ಳದ ಬದಿಯಲ್ಲಿನ ಮೋಟರ್ ಪಂಪಸೆಟ್‍ಗಳು ಹರಿದು ಹೋಗಿವೆ.ಮುದ್ದೇಬಿಹಾಳ ಪಟ್ಟಣದ ತಗ್ಗು ಪ್ರದೇಶದಲ್ಲಿದ್ದ ಕೆಲವು ಮನೆಗಳಿಗೆ ಮಳೆ ನೀರು ನುಗ್ಗಿದೆ.

ಯರಝರಿ ಪಿಡಿಓ ವಿಜಯಾ ಮುದಗಲ್ ಮಾತನಾಡಿ, ಗ್ರಾಮಲೆಕ್ಕಾಧಿಕಾರಿ ಹಾಗೂ ನಾವು ಸರ್ವೆ ಮಾಡಿದ್ದು 10 ಮನೆಗಳಿಗೆ ನೀರು ಹೋಗಿವೆ.ಬಿದರಕುಂದಿ ಹಳ್ಳ ತುಂಬಿ ಹರಿದಿದ್ದರಿಂದ ಊರೊಳಕ್ಕೆ ಬಂದಿವೆ.ಪಿಆರ್‍ಇಡಿ ಎಇಇ ಅವರಿಗೆ ಪತ್ರ ಬರೆದಿದ್ದೇವೆ.ಸೇತುವೆಯ ಕೆಲ ಭಾಗ ಕುಸಿದಿದೆ.ಅದನ್ನು ದುರಸ್ತಿಪಡಿಸುವಂತೆ ತಿಳಿಸಿದ್ದೇವೆ ಎಂದು ಹೇಳಿದರು.

ಮುದ್ದೇಬಿಹಾಳ ತಾಲೂಕಾ ಪಂಚಾಯತಿಯ ಯೋಜನಾ ನಿರ್ದೇಶಕರ ಕಛೇರಿಯೊಳಕ್ಕೂ ನೀರು ನುಗ್ಗಿದ್ದರಿಂದ ಅಧಿಕಾರಿಗಳ ಸೇವೆಗೆ ಅಡಚಣೆಯುಂಟಾಯಿತು.ಕಟ್ಟಡ ಶಿಥಿಲಗೊಂಡಿದ್ದು ಅಲ್ಲಲ್ಲಿ ಸೋರುತ್ತಿದೆ.ತಾಪಂ ಆವರಣದಲ್ಲಿ ಮಳೆ ನೀರು ಸಂಗ್ರಹವಾಗಿ ಕಚೇರಿಯೊಳಕ್ಕೆ ನುಗ್ಗುವಂತಾಗಿದೆ.


ತಹಸೀಲ್ದಾರ್ ಬಿ.ಎಸ್.ಕಡಕಭಾವಿ ಮಾತನಾಡಿ, ಮಳೆಯಿಂದಾಗಿ ತಾಲೂಕಿನಲ್ಲಿ 25 ಮನೆಗಳು ಬಿದ್ದಿವೆ.ಅಡವಿ ಹುಲಗಬಾಳ ಸೇತುವೆ ಕುಸಿದಿದೆ.ಯರಝರಿ ಗ್ರಾಮದಲ್ಲಿ ನೀರು ಮನೆಗಳಿಗೆ ನುಗ್ಗಿದೆ ಎಂಬ ಮಾಹಿತಿ ಲಭ್ಯವಾಗಿದೆ.ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ ಎಂದು ತಿಳಿಸಿದರು.