
ಬ್ಯಾಡಗಿ,ಫೆ20: ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಶೈಕ್ಷಣಿಕ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಾವಿರಾರು ಕೋಟಿ ಅನುದಾನ ಒದಗಿಸುವ ಮೂಲಕ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿವೆ ಎಂದು ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಹೇಳಿದರು.
ಬ್ಯಾಡಗಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹಾವೇರಿ ತಾಲೂಕಿನ ಹೊಮ್ಮರಡಿ, ಹಿರೇಲಿಂಗದಹಳ್ಳಿ ಮತ್ತು ಬೆಂಚಿಹಳ್ಳಿ ಗ್ರಾಮಗಳಲ್ಲಿ ಪಂಚಾಯತ್ ರಾಜ್ ಉಪವಿಭಾಗ ಹಾಗೂ ಲೋಕೋಪಯೋಗಿ ಇಲಾಖೆಯ ವತಿಯಿಂದ 1.83ಕೋಟಿ ರೂಗಳ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ರಸ್ತೆ ಹಾಗೂ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಹೊಮ್ಮರಡಿ – ಕುರುಬಗೊಂಡ ರಸ್ತೆಗೆ 70ಲಕ್ಷ, ಹೊಮ್ಮರಡಿ- ಗುಂಡೇನಹಳ್ಳಿ ರಸ್ತೆಗೆ 25ಲಕ್ಷ, ದೇವಿಹೊಸೂರ- ಬೆಂಚಿಹಳ್ಳಿ ರಸ್ತೆಗೆ 75ಲಕ್ಷ ಹಾಗೂ ಹಿರೇಲಿಂಗದಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕೊಠಡಿ ನಿರ್ಮಾಣಕ್ಕೆ 13.40ಲಕ್ಷ ರೂಗಳ ಅನುದಾನವನ್ನು ಒದಗಿಸಲಾಗಿದ್ದು, ಗುಣಮಟ್ಟದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಪಿಕಾರ್ಡ್ ಬ್ಯಾಂಕ್ ಸದಸ್ಯ ಸುರೇಶ ಯತ್ನಳ್ಳಿ, ಪಿಆರ್’ಡಿ ಎಇಇ ಈಶಪ್ಪ, ಜೆಇ ವಿಜಯಕುಮಾರ ಜಿಗಳಿ, ಪಿಡಬ್ಲ್ಯೂಡಿ ಜೆಇ ಎ.ಎಸ್.ಪಾಟೀಲ, ಗುತ್ತಿಗೆದಾರರಾದ ಚಂದ್ರು ಹೊನಕೇರಿ, ಮಾಲತೇಶ ದಿಡಗೂರ, ಮಹೇಂದ್ರ ಹಾಗೂ ಆಯಾ ಗ್ರಾಪಂಗಳ ಅಧ್ಯಕ್ಷರು, ಸದಸ್ಯರು, ಮುಖಂಡರು ಮತ್ತು ಶಾಲಾ ಶಿಕ್ಷಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.