ರಸ್ತೆ ವಿಸ್ತರಣೆ ವಿಳಂಬ ಸರ್ಕಾರಕ್ಕೆ ಕೋರ್ಟ್ ನೋಟೀಸ್

ಬೆಂಗಳೂರು, ಜ.೮- ನಗರದ ಮೇಖ್ರಿ ವೃತ್ತದಿಂದ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ವಿಸ್ತರಣೆಗೆ ವಿಳಂಬವಾಗುತ್ತಿರುವ ಬಗ್ಗೆ ವಿವರಣೆ ನೀಡುವಂತೆ ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಬಳ್ಳಾರಿ ರಸ್ತೆಯಿಂದ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ವಿಸ್ತರಣೆ ಕೋರಿ ನಗರದ ಸಮರ್ಪಣಾ ಟ್ರಸ್ಟ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ವಾದ-ಪ್ರತಿವಾದ ಆಲಿಸಿದ ಪೀಠ, ರಸ್ತೆ ವಿಸ್ತರಣೆಗೆ ಸಂಬಂಧಿಸಿದಂತೆ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್‌ಗಳು ಈಗಾಗಲೇ ಹಲವು ನಿರ್ದೇಶನಗಳನ್ನು ನೀಡಿವೆ.
ರಸ್ತೆ ವಿಸ್ತರಣೆಗಾಗಿ ಟಿಡಿಆರ್ ನಿಯಮಗಳ ಪ್ರಕಾರ, ಪ್ರಮಾಣ ಪತ್ರಗಳನ್ನು ನೀಡುವ ಮೂಲಕ ಆಸ್ತಿ ಸ್ವಾಧೀನಪಡಿಸಿಕೊಳ್ಳಲು ಸುಪ್ರೀಂ ಕೋರ್ಟ್ ೨೦೧೪ ರಲ್ಲಿ ನಿರ್ದೇಶನ ನೀಡಿದೆ. ಇದೇ ವಿಚಾರವಾಗಿ ೨೦೧೬ರಲ್ಲಿ ಹೈಕೋರ್ಟ್ ಕೂಡ ಆದೇಶಿಸಿದೆ.
ಆದರೆ, ರಸ್ತೆ ವಿಸ್ತರಣೆಗೆ ಅಗತ್ಯವಿರುವ ೧೬ ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದ್ದರೂ, ಪ್ರಕ್ರಿಯೆಯನ್ನು ಮಾತ್ರ ಮುಂದುವರೆಸಿಲ್ಲ.ಹಾಗಾಗಿ ಈ ಆದೇಶಗಳನ್ನು ಪಾಲನೆ ಮಾಡಿರುವ ಕುರಿತು ಮುಂದಿನ ತಿಂಗಳು ೧೫ ರೊಳಗೆ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿತು.