ರಸ್ತೆ ಮೇಲೆ ಚರಂಡಿ ನೀರು, ರೋಗದ ಭೀತಿ

ದೇವದುರ್ಗ: ತಾಲೂಕಿನ ಜಾಲಹಳ್ಳಿ ಪಟ್ಟಣದ ಬಹುತೇಕ ವಾರ್ಡ್‌ಗಳಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ನೀರು ಎಲ್ಲೆಂದರಲ್ಲಿ ನಿಲ್ಲುತ್ತಿದ್ದು, ರೋಗ ಹರಡುವ ಭೀತಿ ಎದುರಾಗಿದೆ.
ಗ್ರಾಪಂ ಆಡಳಿತ ಮಂಡಳಿಗೆ ಒಳಚರಂಡಿ ನಿರ್ಮಿಸುವಂತೆ ವಿವಿಧ ಸಂಘಟನೆಗಳು ಹತ್ತಾರು ಸಲ ಮನವಿ ಸಲ್ಲಿಸಿದರೂ ಸ್ಪಂದಿಸಿಲ್ಲ. ಪಟ್ಟಣದ ಹಲವು ವಾರ್ಡ್‌ಗಳಲ್ಲಿ ಮಳೆ ಹಾಗೂ ಚರಂಡಿ ನೀರು ಎಲ್ಲೆಂದರಲ್ಲಿ ನಿಲ್ಲುತ್ತಿವೆ. ಇದರಿಂದ ವಾಹನ ಸವಾರರು ಮಾತ್ರವಲ್ಲ ಪಾದಚಾರಿಗಳು ಓಡಾಟಕ್ಕೂ ತೊಂದರೆ ಉಂಟಾಗಿದೆ.
ಚರಂಡಿ ನೀರು ಎಲ್ಲೆಂದರಲ್ಲಿ ನೀರು ನಿಲ್ಲುತ್ತಿರುವ ಕಾರಣ ವಿಪರೀತ ಸೊಳ್ಳೆಗಳು ಹುಟ್ಟಿಕೊಂಡಿವೆ. ಇದರಿಂದ ರಾತ್ರಿಯಾದರೆ ಸಾಕು ಸೊಳ್ಳೆ ಕಾಟಕ್ಕೆ ಜನರು ನಿದ್ದೆ ಮಾಡದಂಥ ಸ್ಥಿತಿಯಿದೆ. ಸೊಳ್ಳೆಗಳಿಂದ ಮಲೇರಿಯಾ, ಡೆಂಘು, ಚಿಕನಗುನ್ಯ ರೋಗಗಳು ಕಾಣಿಸಿಕೊಳ್ಳುತ್ತಿವೆ. ಇದರಿಂದ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಪಟ್ಟಣದ ಬಸ್ ನಿಲ್ದಾಣ, ಶ್ರೀರಂಗನಾಥ ದೇವಸ್ಥಾನ ಮುಂಭಾಗ, ಶ್ರೀಜಯಶಾಂತಲಿಂಗೇಶ್ವರ ದೇವಸ್ಥಾನ ಆವರಣ, ಪೊಲೀಸ್ ಠಾಣೆ ಮುಂಭಾಗ, ಬಸವೇಶ್ವರ ಬಡಾವಣೆ, ಕೆಇಬಿ ಕಾಲೋನಿ ಸೇರಿ ವಿವಿಧ ವಾರ್ಡ್‌ಗಳಲ್ಲಿ ರಸ್ತೆ ಮೇಲೆ ಚರಂಡಿ ನೀರು ನಿಲ್ಲುತ್ತಿವೆ. ಒಂದೆಡೆ ಸೊಳ್ಳೆಗಳ ಕಾಟವಾದರೆ, ಇನ್ನೊಂದೆಡೆ ದುರ್ನಾತ ಜನರ ಜೀವ ಹಿಂಡುತ್ತಿದೆ.
ಬೇಜವಾಬ್ದಾರಿ ಪಿಡಿಒ:
ಪಟ್ಟಣದಲ್ಲಿ ಹಲವು ಸಮಸ್ಯೆಗಳಿದ್ದರೂ ಗ್ರಾಪಂ ಪಿಡಿಒ ಪತ್ತೆಪ್ಪ ರಾಠೋಡ್ ಹಾಗೂ ಅಧಿಕಾರಿಗಳು ಬೇಜವಾಬ್ದಾರಿ ತೋರುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಹಲವು ಸಲ ಸಂಘಟನೆಗಳು ಮನವಿ ಮಾಡಿದರೂ ಕ್ಯಾರೆ ಎನ್ನುತ್ತಿಲ್ಲ. ಚರಂಡಿ ನಿರ್ಮಿಸದೆ ಹಲವು ವಾರ್ಡ್‌ಗಳಲ್ಲಿ ಭೋಗಸ್ ಬಿಲ್ಲ ಎತ್ತುವಳಿ ಮಾಡಿಕೊಂಡಿದ್ದಾರೆ. ಕೇಂದ್ರ ಸ್ಥಾನದಲ್ಲಿ ಇರದೆ ಲಿಂಗಸುಗೂರಿನಲ್ಲಿ ವಾಸಿಸುತ್ತಿದ್ದು, ಮನಸಿಗೆ ಬಂದಾಗ ಕೆಲಸಕ್ಕಾಗಿ ಜಾಲಹಳ್ಳಿಗೆ ಬರುತ್ತಾರೆ. ಉದ್ಯೋಗ ಖಾತ್ರಿ ಯೋಜನೆಯಡಿ ಹಲವು ಲೋಪ ಎಸಗಿದ್ದಾರೆ. ನಕಲಿ ಖಾತೆ ಸೃಷ್ಟಿ ಮಾಡಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಹಣ ಎತ್ತುವಳಿ ಮಾಡಿಕೊಂಡಿದ್ದಾರೆ. ಅಲ್ಲದೆ ವಸತಿ ಯೋಜನೆಯಡಿ ಬಡವರಿಗೆ ಮನೆ ಹಂಚಿಕೆ ಮಾಡಲು ಹಣದ ಬೇಡಿಕೆ ಇಡುತ್ತಿದ್ದಾರೆ ಎಂದು ಗ್ರಾಮಸ್ಥರು ಹಾಗೂ ಕೂಲಿಕಾರ್ಮಿಕರು ಆರೋಪಿಸಿದ್ದಾರೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಗ್ರಾಪಂನ ವಿವಿಧ ಯೋಜನೆಗಳ ಬಗ್ಗೆ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಕೋಟ್======

ಜಾಲಹಳ್ಳಿ ಗ್ರಾಪಂ ಆಡಳಿತ ಜನರಿಗೆ ಸೌಲಭ್ಯ ಕಲ್ಪಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಗ್ರಾಪಂ ವ್ಯಾಪ್ತಿಯ ವಿವಿಧ ಯೋಜನೆಯಡಿ ಭಾರಿ ಭ್ರಷ್ಟಾಚಾರ ನಡೆದಿದೆ. ಇದರಲ್ಲಿ ಅಧಿಕಾರಿಗಳು ಭಾಗಿಯಾಗಿ ಅವ್ಯವಹಾರ ನಡೆಸಿದ್ದಾರೆ. ಬಹುತೇಕ ವಾರ್ಡ್‌ಗಳಲ್ಲಿ ಒಳಚರಂಡಿ, ಕಸದ ಸಮಸ್ಯೆ, ಕುಡಿವ ನೀರಿನ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಸಂಘಟನೆಗಳು ಪ್ರತಿಭಟನೆ ನಡೆಸಿದರೂ ಅಧಿಕಾರಿಗಳ ದಪ್ಪ ಚರ್ಮಕ್ಕೆ ತಾಕಿಲ್ಲ.

| ಲಿಂಗಣ್ಣ ಮಕಾಶಿ

ದಲಿತ ಸಂಘಟನೆ ಮುಖಂಡ, ಜಾಲಹಳ್ಳಿ