ರಸ್ತೆ ಮೇಲೆ ಚರಂಡಿ ನೀರು: ಇನ್ನಿಲ್ಲದ ಸಂಕಷ್ಟ ಎದುರಿಸುತ್ತಿರುವ ಮೌನೇಶ್ವರ ಕಾಲೋನಿ ನಾಗರಿಕರು

ಕಲಬುರಗಿ,ಜು.25-ಮಹಾನಗರ ಪಾಲಿಕೆಯ ವಾರ್ಡ ನಂಬರ್ 52ರ ವ್ಯಾಪ್ತಿಯಲ್ಲಿ ಬರುವ ಉದನೂರ ರಸ್ತೆಯ ಮೌನೇಶ್ವರ ಕಾಲೋನಿಯಲ್ಲಿ ಚರಂಡಿ ನೀರು ರಸ್ತೆ ಮೇಲೆ ಹರಿದು ಹೋಗುತ್ತಿರುವುದರಿಂದ ಜನ ಮೂಗುಮುಚ್ಚಿಕೊಂಡು ಓಡಾಡುವಂತಾಗಿದೆ.
ಚರಂಡಿ ನೀರು ರಸ್ತೆ ತುಂಬೆಲ್ಲಾ ತುಂಬಿ ನಿಂತಿರುವುದರಿಂದ ವಾಹನ ಸವಾರರು ಮತ್ತು ಪಾದಚಾರಿಗಳು ರಸ್ತೆಯ ಮೇಲೆ ಓಡಾಡದಂತಹ ಸ್ಥಿತಿ ನಿರ್ಮಾಣವಾಗಿದೆ. ಚರಂಡಿ ನೀರು ರಸ್ತೆಯ ತುಂಬೆಲ್ಲಾ ತುಂಬಿ ನಿಂತಿರುವುದರಿಂದ ಅಕ್ಕಪಕ್ಕದ ಮನೆಯವರು ಇನ್ನಿಲ್ಲದ ಸಂಕಷ್ಟ ಎದುರಿಸುವಂತಾಗಿದೆ.
ರಸ್ತೆ ಮೇಲೆ ಚರಂಡಿ ನೀರು ನಿಂತು ಜನ ಓಡಾಡಲೂ ಆಗದೆ ಇರುವಂತಹ ಸ್ಥಿತಿ ನಿರ್ಮಾಣವಾದರೂ ಸಂಬಂಧಪಟ್ಟವರು ಮಾತ್ರ ಇತ್ತ ಗಮನ ಹರಿಸುತ್ತಿಲ್ಲ ಎಂದು ಮೌನೇಶ್ವರ ಕಾಲೋನಿಯ ನಾಗರಿಕರು ಆರೋಪಿಸಿದ್ದಾರೆ.
ಈ ಸಮಸ್ಯೆಯ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸಿ ರಸ್ತೆ ಮೇಲೆ ತುಂಬಿ ನಿಂತಿರುವ ಚರಂಡಿ ನೀರನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಮಳೆಗಾಲದ ಈ ಸಂದರ್ಭದಲ್ಲಿ ಚರಂಡಿ ನೀರು ರಸ್ತೆ ಮೇಲೆ ತುಂಬಿ ನಿಂತಿರುವುದು ಅನೇಕ ರೋಗ ರುಜಿನಗಳಿಗೆ ಆಹ್ವಾನ ನೀಡಿದಂತಾಗುತ್ತಿದೆ. ಸೊಳ್ಳೆಗಳ ಕಾಟ ಮತ್ತಷ್ಟು ಹೆಚ್ಚಾಗಿ ಜನ ರೋಗ ರುಜಿನಗಳಿಗೆ ತುತ್ತಾಗುವ ಮೊದಲು ಸಂಬಂಧಪಟ್ಟವರು ಚರಂಡಿ ನೀರು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು, ಡ್ರೈನೇಜ್ ದುರಸ್ಥಿಗೊಳಿಸಿ ನೀರು ಸರಗವಾಗಿ ಹರಿದು ಹೋಗುವಂತೆ ಮಾಡಬೇಕು, ಸಂಬಂಧಪಟ್ಟವರು ಈ ಬಗ್ಗೆ ತುರ್ತಾಗಿ ಕ್ರಮ ಕೈಗೊಳ್ಳದೇ ಹೋದಲ್ಲಿ ಕಾಲೋನಿಯ ನಾಗರಿಕರೆಲ್ಲಾ ಸೇರಿ ಪ್ರತಿಭಟನೆ ನಡೆಸಬೇಕಾದದ್ದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದ್ದಾರೆ.