ರಸ್ತೆ ಮಧ್ಯೆದಲ್ಲೇ ವಿದ್ಯುತ್ ಕಂಬಗಳ ಬಿಟ್ಟು ಸಿಸಿ ರಸ್ತೆ ನಿರ್ಮಿಸಿದ ಭೂಪ


ಚಿತ್ರದುರ್ಗ, ಸೆ ೧೫- ರಸ್ತೆ ಮಧ್ಯೆದಲ್ಲೇ ವಿದ್ಯುತ್ ಕಂಬಗಳು ಬಿಟ್ಟು ಗುತ್ತಿಗೆದಾರನೊಬ್ಬ ಸಿಸಿ ರಸ್ತೆ ನಿರ್ಮಿಸಿ ಯಡವಟ್ಟು ಮಾಡಿರುವ ಘಟನೆ ಚಿತ್ರದುರ್ಗ ನಗರದ ತುರುವನೂರು ನಲ್ಲಿ ನಡೆದಿದೆ.
ತುರುವನೂರು ಮಾರ್ಗದ ಆರ್‌ಟಿಒ ಕಚೇರಿ ಮುಂಭಾಗದ ಮುಖ್ಯ ರಸ್ತೆ. ಇಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಬರೋಬ್ಬರಿ ಏಳು ಕೋಟಿ ಹಣ ಮಂಜೂರು ಮಾಡಿದೆ ಸರ್ಕಾರ. ಸಾರ್ವಜನಿಕರ ನಿರೀಕ್ಷೆ ಪ್ರಕಾರ ಎಲ್ಲಿಯೂ ಎಡರು ತೊಡರು ಇರದಂತ ರಾಜಪಥದಂತ ರಸ್ತೆ ನಿರ್ಮಾಣ ಆಗಬೇಕಿತ್ತು. ಆದರೆ ಯಾರೂ ನಿರೀಕ್ಷಿಸದ ಅಫಘಾತಕಾರಿ ರಸ್ತೆ ನಿರ್ಮಾಣವಾಗಿದೆ. ಅದೇನಂದ್ರೆ ನಟ್ಟ ನಡುವೆ ವಿದ್ಯುತ್ ಕಂಬಗಳನ್ನ ಬಿಟ್ಟು ಹೊಸದಾಗಿ ಸಿಸಿ ರಸ್ತೆ ನಿರ್ಮಿಸಲಾಗಿದೆ.
ರಸ್ತೆ ಅಗಲೀಕರಣಕ್ಕೆ ಮಧ್ಯದಿಂದ ೧೦.೫ ಮೀಟರ್ ಅಗಲ ಅಳತೆ ಮಾಡಿದ್ದ ಪಿಡಬ್ಲ್ಯೂಒ ಅಧಿಕಾರಿಗಳು, ಈ ರಸ್ತೆ ಅಕ್ಕಪಕ್ಕದಲ್ಲಿದ್ದ ದಿನ-ನಿತ್ಯ ಜನರಿಗೆ ನೆರಳು ಕೊಡುವ ಮರಗಳನ್ನ ಕಡಿದು ಬುಡಸಮೇತ ನೆಲಸಮ ಮಾಡಿದ್ದಾರೆ. ಆದರೆ ತಾಂತ್ರಿಕವಾಗಿ ಬಳಕೆಯಲ್ಲಿದ್ದ ವಿದ್ಯುತ್ ಕಂಬಗಳನ್ನ ಪಕ್ಕಕ್ಕೆ ಶಿಫ್ಟ್ ಮಾಡಲು ಮಾತ್ರ ಮನಸು ಮಾಡಿಲ್ಲ. ಇತ್ತ ಒಂದೂವರೆ ವರ್ಷದಿಂದ ಕುಂಠಿತವಾಗಿದ್ದ ರಸ್ತೆ ಕಾಮಗಾರಿ ಮುಗಿದ್ರೆ ಸಾಕು ಅಂತ ಗುತ್ತಿಗೆದಾರ ಕಂಬಗಳನ್ನ ರಸ್ತೆಯಲ್ಲಿಯೇ ಬಿಟ್ಟು ಕಾಂಕ್ರೀಟ್ ಹಾಕಿದ್ದಾರೆ.
ಈ ಅವೈಜ್ಞಾನಿಕ ಕಾಮಗಾರಿಯನ್ನ ನೋಡಿರೋ ಸಾರ್ವಜನಿಕರು ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಇನ್ನೂ ಈ ಕುರಿತು ಪ್ರತಿಕ್ರಿಯೆ ನೀಡಿರುವ ಲೋಕೋಪಯೋಗಿ ಇಲಾಖೆ ಇಇ ಸತೀಶ್ ಬಾಬು, ಈ ಕಾಮಗಾರಿ ಕಳೆದ ಒಂದೂವರೆ ವರ್ಷದ ಹಿಂದೆ ಮಂಜೂರಾಗಿ ಕಾಮಗಾರಿ ನಡೆಯುತ್ತಲಿದೆ. ರಸ್ತೆ ಮಧ್ಯೆ ಬರುವ ವಿದ್ಯುತ್ ಕಂಬಗಳ ತೆರವಿಗೆ ವಿದ್ಯತ್ ವಿಭಾಗಕ್ಕೆ ಈಗಾಗಲೇ ೬೨ ಲಕ್ಷ ನೀಡಿದ್ದೇವೆ. ಅವರು ಈಗ ಟೆಂಡರ್ ಕರೆದಿದ್ದು, ಇನ್ನು ಹದಿನೈದು ದಿನಗಳಲ್ಲಿ ಕಂಬಗಳ ತೆರವು ಮಾಡುತ್ತಾರೆ. ಅಲ್ಲಿವರೆಗೂ ನಾವು ಸಾರ್ವಜನಿಕರ ಓಡಾಟಕ್ಕೆ ರಸ್ತೆಯನ್ನ ಬಿಡುವುದಿಲ್ಲ ಎಂದು ತಿಳಿಸಿದ್ದಾರೆ.