ರಸ್ತೆ ಬದಿ ನಿಂತಿದ್ದ ಎತ್ತಿನಗಾಡಿಗೆ ಸಾರಿಗೆ ಬಸ್ ಡಿಕ್ಕಿ: 20ಕ್ಕೂ ಹೆಚ್ಚು ಮಂದಿ ಗಾಯ

ಪಾಂಡವಪುರ: ಏ.04:- ಚಾಲಕನ ಅಜಾಗರೂಕತೆಯಿಂದ ಸಾರಿಗೆ ಬಸ್ ರಸ್ತೆಬದಿಯಲ್ಲಿ ನಿಂತಿದ್ದ ಎತ್ತಿನಗಾಡಿಗೆ ಡಿಕ್ಕಿ ಹೊಡೆದು ಕಬ್ಬಿನ ಗದ್ದೆಗೆ ನುಗ್ಗಿದ ಪರಿಣಾಮ ಬಸ್‍ನಲ್ಲಿದ್ದ ಪ್ರಯಾಣಿಕರು ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದು, ನಡೆಯಬಹುದಾದ ಭಾರೀ ಅನಾಹುತ ತಪ್ಪಿದೆ.
ತಾಲ್ಲೂಕಿನ ಕನಗನಮರಡಿ ಗ್ರಾಮದ ಸರ್ಕಾರಿ ಶಾಲೆಯ ಕೂಗಳತೆಯಲ್ಲಿ ಈ ದುರಂತ ನಡೆದಿದ್ದು, ಸಾರಿಗೆ ಬಸ್ ಮಂಡ್ಯದಿಂದ ಹುಲಿಕೆರೆ ಬುಗ, ವದೇಸಮುದ್ರ ಮಾರ್ಗವಾಗಿ ಕನಗನಮರಡಿ ಗ್ರಾಮದ ಬಳಿ ಬರುತ್ತಿದ್ದ ವೇಳೆ ರಸ್ತೆ ಪಕ್ಕದಲ್ಲಿ ನಿಂತಿದ್ದ ಎತ್ತಿನಗಾಡಿಗೆ ಅಪ್ಪಳಿಸಿ ನಂತರದಲ್ಲಿ ಕಬ್ಬಿನಗದ್ದೆಗೆ ನುಗ್ಗಿದೆ. ಈ ವೇಳೆ ಬಸ್‍ನಲ್ಲಿದ್ದ ಶಂಭುಲಿಂಗಯ್ಯ, ಪ್ರಕಾಶ್, ಸೌಂದರ್ಯ, ಪುಷ್ಪಾವತಿ, ಮಾನಸ, ಪ್ರದೀಪ, ಸಾವಿತ್ರಮ್ಮ, ಪಂಕಜಾ, ಲಕ್ಷ್ಮಮ್ಮ, ಪಾರ್ವತಮ್ಮ, ಪ್ರಜ್ವಲ್ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಪ್ರಯಾಣಿಕರು ಮತ್ತು ಶಾಲಾ ಮಕ್ಕಳುಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಎತ್ತಿನಗಾಡಿಗೆ ಡಿಕ್ಕಿ ಹೊಡೆದಾಗ ಗಾಬರಿಗೊಂಡ ಶಾಲಾ ಮಕ್ಕಳು ಗಟ್ಟಿಯಾಗಿ ಚೀರಿಕೊಂಡಿದ್ದಾರೆ. ನಂತರದಲ್ಲಿ ಬಸ್ ಕಬ್ಬಿನಗದ್ದೆಗೆ ನುಗ್ಗುತ್ತಿದ್ದಂತೆಯೇ ಅಕ್ಕಪಕ್ಕದಲ್ಲಿದ್ದ ದಾರಿಹೋಕರು ತಕ್ಷಣ ಸ್ಥಳಕ್ಕಾಗಮಿಸಿ ಬಸ್‍ನಲ್ಲಿದ್ದ ಮಕ್ಕಳು ಮತ್ತು ಪ್ರಯಾಣಿಕರನ್ನು ಕೆಳಗಿಳಿಸಿ ಆಂಬ್ಯುಲೈನ್ಸ್‍ಗೆ ಕರೆ ಮಾಡಿದ್ದಾರೆ.
ಆಂಬ್ಯುಲೈನ್ಸ್ ನಿಗದಿತ ವೇಳೆಗೆ ಬಾರದ ಕಾರಣ ಅದೇ ಮಾರ್ಗವಾಗಿ ದುದ್ದ ಖಾಸಗಿ ಕಾರ್ಯಕ್ರಮದಲ್ಲಿ `ಭಾಗಿಯಾಗಿ ವಾಪಾಸ್ಸಾಗುತ್ತಿದ್ದ ಬಿಜೆಪಿ ಮುಖಂಡ ಡಾ. ಎನ್.ಎಸ್.ಇಂದ್ರೇಶ್ ಅವರು ತಮ್ಮ ಕಾರಿನಲ್ಲಿ ಗಾಯಾಳುಗಳನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸಿ ಪ್ರಥಮ ಚಿಕಿತ್ಸೆ ಕೊಡಿಸಿದರು. ಮಾನವೀಯತೆ ಮೆರೆದ ಡಾ.ಇಂದ್ರೇಶ್ ಕಾರ್ಯವೈಖರಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದುರಂತವೆಂದರೆ ಕಳೆದ 8 ವರ್ಷಗಳ ಹಿಂದೆ ಇದೇ ರಸ್ತೆಯ ಸ್ವಲ್ಪ ದೂರದಲ್ಲಿ ಕನಗನಮರಡಿ ಬಸ್ ದುರಂತ ಸಂಭವಿಸಿದ್ದು ಸುಮಾರು 13 ಮಂದಿ ಸಾವಿಗೀಡಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ಅಪಘಾತದಲ್ಲಿ ಗಾಯಗೊಂಡು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳುಗಳನ್ನು ಭೇಟಿ ಮಾಡಿದ ಶಾಸಕ ಸಿ.ಎಸ್.ಪುಟ್ಟರಾಜು, ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡರಲ್ಲದೆ, ಸಾರಿಗೆ ಸಂಸ್ಥೆಯ ಹಿರಿಯ ಅಧಿಕಾರಿಗಳು ಹಾಗೂ ಪೆÇಲೀಸ್ ಇಲಾಖೆಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಅಪಘಾತಕ್ಕೀಡಾದ ಪ್ರಯಾಣಿಕರಿಗೆ ಸೂಕ್ತ ಚಿಕಿತ್ಸೆ ಕೊಡಿಸಿ ಪರಿಹಾರ ನೀಡುವಂತೆ, ಜತೆಗೆ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಸೂಚಿಸಿದರು.
ಪೆÇಲೀಸ್ ಇನ್ಸ್ಪೆಕ್ಟರ್ ಎಂ.ಆರ್.ಲವ ಹಾಗೂ ಸಬ್‍ಇನ್ಸ್ಪೆಕ್ಟರ್ ಮಂಜುನಾಥ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ತನಿಖೆ ನಡೆಸಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಈ ಸಂಬಂಧ ಪಟ್ಟಣದ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೆÇಲೀಸರು ಕ್ರಮ ಕೈಗೊಂಡಿದ್ದಾರೆ.
ತಾತ್ಕಾಲಿಕ ಪರಿಹಾರ:
ಕನಗನಮರಡಿ ಗ್ರಾಮದ ಶಿವಣ್ಣಗೌಡ ಎಂಬುವರಿಗೆ ಸೇರಿದ ಎತ್ತಿನಗಾಡಿಯನ್ನು ಜಮೀನಿನ ಬಳಿಯ ರಸ್ತೆ ಪಕ್ಕದಲ್ಲಿ ನಿಲ್ಲಿಸಲಾಗಿತ್ತು ಎನ್ನಲಾಗಿದೆ. ವದೇಸಮುದ್ರ ಕಡೆಯಿಂದ ಬಂದ ಸಾರಿಗೆ ಬಸ್ ಖಾಲಿ ಎತ್ತಿನಗಾಡಿಗೆ ಅಪ್ಪಳಿಸಿದ ಹಿನ್ನೆಲೆಯಲ್ಲಿ ಗಾಡಿ ಸಂಪೂರ್ಣ ಹಾಳಾಗಿದ್ದು, ಎತ್ತುಗಾಡಿಯನ್ನೇ ತಮ್ಮ ಜೀವನಕ್ಕೆ ಆಧಾರವಾಗಿಟ್ಟುಕೊಂಡು ಜೀವನ ನಡೆಸುತ್ತಿದ್ದ ರೈತ ಈ ಘಟನೆಯಿಂದ ಕಂಗಾಲಾಗಿದ್ದು, ಮುಂದಿನ ಜೀವನೋಪಾಯದ ಬಗ್ಗೆ ಶಾಸಕ ಸಿ.ಎಸ್.ಪುಟ್ಟರಾಜು ಅವರ ಮೊರೆ ಹೋದರು.
ತಕ್ಷಣ ರೈತನ ಕುಟುಂಬಕ್ಕೆ ಸಾರಿಗೆ ಸಂಸ್ಥೆ ಅಧಿಕಾರಿಗಳು 1 ಲಕ್ಷ ಪರಿಹಾರ ನೀಡುವಂತೆ ತಾಕೀತು ಮಾಡಿದರು. ಶಾಸಕರ ನಿರ್ದೇಶನದಂತೆ ಸ್ಥಳದಲ್ಲಿಯೇ ಎತ್ತಿನಗಾಡಿಗೆ ತಾತ್ಕಾಲಿಕವಾಗಿ 20 ಸಾವಿರ ಹಾಗೂ ಕಬ್ಬು ಹಾಳಾಗಿದ್ದರಿಂದ ಕಬ್ಬಿನ ಗದ್ದೆಯ ಮಾಲೀಕನಿಗೆ 2ಸಾವಿರ ಪರಿಹಾರ ನೀಡಲಾಯಿತು.
ಈ ಸಂದರ್ಭ ಮೈಶುಗರ್ ಮಾಜಿ ಅಧ್ಯಕ್ಷ ಜೆ.ಶಿವಲಿಂಗೇಗೌಡ, ಮುಖಂಡರಾದ ಸಂದೇಶ್, ಚಿಕ್ಕಮರಳಿ ನವೀನ್‍ಕುಮಾರ್, ಡಿಪೆÇೀ ಮ್ಯಾನೇಜರ್ ಅಪ್ಪಿರೆಡ್ಡಿ, ಜಾ.ದಳ ಮುಖಂಡರಾದ ಸೋಮೇಗೌಡ, ಬೊಮ್ಮರಾಜು ಇತರರು ಹಾಜರಿದ್ದರು.