ರಸ್ತೆ ಬದಿ ತರಕಾರಿ ಮಾರಾಟಕ್ಕೆ ಅವಕಾಶ ಕಲ್ಪಿಸಿ

ಮಾಗಡಿ, ನ.೫-ಪಟ್ಟಣದ ಟಿಎಪಿಸಿಎಂಎಸ್ ಬಳಿ ಮಾರುಕಟ್ಟೆ ನಿರ್ಮಾಣ ಕಾಮಗಾರಿ ಪ್ರಾರಂಭವಾಗಿದ್ದು, ಇಲ್ಲಿದ್ದ ತರಕಾರಿ ಮಾರುಕಟ್ಟೆಯನ್ನು ಬೇರೆಡೆ ಸ್ಥಳಾಂತರಿಸಲು ಪುರಸಭೆಯ ಅಧಿಕಾರಿಗಳು ಮುಂದಾದ ವೇಳೆ ಮಾರಾಟಗಾರರು ನಮಗೆ ಬಿಡಿಸಿಸಿ ಬ್ಯಾಂಕ್ ಮುಂಭಾಗದ ರಸ್ತೆ ಮತ್ತು ಕೋಟೆ ರಸ್ತೆ ಬದಿ ತರಕಾರಿ ಮಾರಾಟ ಮಾಡಲು ಅವಕಾಶ ಕಲ್ಪಿಸುವಂತೆ ನೂರಾರು ಮಂದಿ ಪೊಲೀಸ್ ಠಾಣೆ ಬಳಿ ಜಮಾಯಿಸಿದರು.
ಈ ವೇಳೆ ಪುರಸಭಾ ಸದಸ್ಯ ಅನಿಲ್ ಕುಮಾರ್, ಮುಖ್ಯಾಧಿಕಾರಿ ಎಂ.ಎನ್. ಮಹೇಶ್, ಪಿಎಸ್‌ಐ ಟಿ. ವೆಂಕಟೇಶ್ ಸ್ಥಳಕ್ಕೆ ಬೇಟಿ ನೀಡಿ ಇನ್ನೊಂದು ತಿಂಗಳೊಳಗೆ ಮಾರುಕಟ್ಟೆ ನಿರ್ಮಾಣವಾಗಲಿದ್ದು ಅಲ್ಲಿಯವರೆಗೂ ತಾತ್ಕಾಲಿಕವಾಗಿ ಕೆಂಪೇಗೌಡ ಬಯಲು ರಂಗಮಂದಿರದಲ್ಲಿನ ಟೆಂಪೋ, ಆಟೋ, ಕಾರು ನಿಲ್ದಾಣವನ್ನು ಹೊಂಬಾಳಮ್ಮನ ಪೇಟೆ ಕೆರೆಯ ಬಳಿ ನಿಲ್ಲಿಸಲು ಅವಕಾಶ ಕಲ್ಪಿಸಲಾಗುವುದು.
ಕೆಂಪೇಗೌಡ ಬಯಲು ರಂಗಮಂದಿರದ ಬಳಿ ತರಕಾರಿ ಮಾರಾಟ ಮಾಡಿಕೊಳ್ಳಿ ಎಂದು ಮನವಿ ಮಾಡಿದ ನಂತರ ಪುರಸಭೆ ಸದಸ್ಯ ಮತ್ತು ಅಧಿಕಾರಿಗಳ ತಂಡ ರಂಗಮಂದಿರ ಸ್ಥಳಕ್ಕೆ ಬೇಟಿ ನೀಡಿ ನಿಲ್ದಾಣವನ್ನು ತೆರವುಗೊಳಿಸುವಂತೆ ಟೆಂಪೋ, ಆಟೋ, ಕಾರು ಚಾಲಕರ ಸಂಘದ ಅಧ್ಯಕ್ಷ ನರಸಿಂಹಯ್ಯಗೆ ಮನವಿ ಮಾಡಿದ ನಂತರ ಕೆಂಪೇಗೌಡ ಬಯಲು ರಂಗಮಂದಿರದ ಬಳಿ ತರಕಾರಿ ಮಾರಾಟಮಾಡಲು ಜಾಗ ಗುರುತಿಸಿಕೊಳ್ಳಲು ಮುಗಿಬಿದ್ದರು.
ಪುರಸಭೆ ಸದಸ್ಯ ಅನಿಲ್ ಕುಮಾರ್ ಮಾತನಾಡಿ, ಶಾಸಕ ಎ.ಮಂಜುನಾಥ್ ಅವರು ಬೀದಿ ಬದಿ ವ್ಯಾಪಾರಿಗಳಿಗೆ ಶಾಶ್ವತವಾಗಿ ಮಾರುಕಟ್ಟೆ ಕಲ್ಪಿಸಲು ಸುಮಾರು ೨.೮೬ ಕೋಟಿ ವೆಚ್ಚದಲ್ಲಿ ಸುಸಜ್ಜಿತ ತರಕಾರಿ, ಹೂ ಮಾರುಕಟ್ಟೆ ನಿರ್ಮಿಸಲಾಗುತ್ತಿದ್ದು ರಸ್ತೆ ಬದಿ ವ್ಯಾಪರಸ್ಥರು ಕಾಮಗಾರಿ ಮುಗಿಯವರೆಗೂ ಪುರಸಭೆ ನಿಗದಿಪಡಿಸಿರುವ ಸ್ಥಳದಲ್ಲಿ ವ್ಯಾಪಾರಮಾಡಲು ಅವಕಾಶ ಕಲ್ಪಿಸಲಾಗಿದೆ ಎಲ್ಲರೂ ಸಹಕರಿಸುವಂತೆ ಮನವಿ ಮಾಡಿದರು.
ಪುರಸಭೆ ಮುಖ್ಯಾಧಿಕಾರಿ ಎಂ.ಎನ್.ಮಹೇಶ್ ಮಾತನಾಡಿ, ಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲ ಕಲ್ಪಿಸಲು ಹೈಟೆಕ್ ಮಾರುಕಟ್ಟೆ ನಿರ್ಮಿಸಲು ಕಾಮಗಾರಿ ನಡೆಯುತ್ತಿದ್ದು ಈಗಾಗಲೇ ಗುರುತಿಸಿರುವ ಜಾಗದಲ್ಲಿ ಎಲ್ಲರೂ ಅನ್ಯೂನ್ಯವಾಗಿ ವ್ಯಾಪಾರ ವಹಿವಾಟು ನಡೆಸಿಕೊಂಡು ಹೋಗುವಂತೆ ಮನವಿ ಮಾಡಲಾಗಿದೆ ಎಂದ ಅವರು, ಮಾರುಕಟ್ಟೆ ನಿರ್ಮಿಸುತ್ತಿರುವ ಬಳಿ ಬಿಡಿಸಿಸಿ ಬ್ಯಾಂಕ್‌ಗೆ ಸೇರಿದ ಜಾಗವಿದೆ ಎಂದು ಬಿಡಿಸಿಸಿ ಬ್ಯಾಂಕ್ ಮ್ಯಾನೇಜರ್ ಶಿವಣ್ಣ ಅರ್ಜಿ ನೀಡಿದ್ದು ಈ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡುವಂತೆ ನಮ್ಮ ಮ್ಯಾನೇಜರ್‌ಗೆ ಸೂಚಿಸಲಾಗಿದೆ ಎಂದರು.