ರಸ್ತೆ ಬದಿ ಟೊಮ್ಯಾಟೊ ತೆರವಿಗೆ ಒತ್ತಾಯ

ಕೋಲಾರ,ಮೇ.೧೯: ಕೊಂಡರಾಜನಹಳ್ಳಿ ಗ್ರಾಮ, ವಿಜಯನಗರ ರಸ್ತೆ ಬದಿಯಲ್ಲಿ ಹಾಕಿರುವ ಟೊಮೋಟೋ ರಾಶಿಯನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಕೊಂಡರಾಜನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಪುಷ್ಪ ಬಾಬು ರವರು ಎ.ಪಿ.ಎಂ.ಸಿ ಕಾರ್ಯದರ್ಶಿ ರವಿಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ಜಿಲ್ಲೆಯ ರೈತರು ತಾವು ಬೆಳೆದಂತಹ ಟಮೋಟೋಗೆ ಸೂಕ್ತ ಬೆಲೆ ಇಲ್ಲದ ಕಾರಣ ಕೊಂಡರಾಜನಹಳ್ಳಿ ಗ್ರಾಮ (ವಿಜಯನಗರ) ರಸ್ತೆ ಬದಿಯಲ್ಲಿ ಲೋಡುಗಟ್ಟಲೇ ಟೊಮೋಟೋ ಸುರಿದು ಹೋಗುತ್ತಿದ್ದಾರೆ. ಸದರಿ ಟೊಮೋಟೋ ಕೊಳೆತು ದುರ್ವಾಸನೆ ಬರುತ್ತಿದ್ದು, ಅಲ್ಲಿನ ನಿವಾಸಿಗಳಿಗೆ ತುಂಬಾ ತೊಂದರೆಯಾಗುತ್ತಿದೆ.
ಆದ ಕಾರಣ ರಸ್ತೆ ಬದಿಯಲ್ಲಿ ಸುರಿದಿರುವ ಟಮೋಟೋ ರಾಶಿಯನ್ನು ತೆರವುಗೊಳಿಸಿ ಸೂಕ್ತ ಸ್ಥಳದಲ್ಲಿ ವಿಲೇವಾರಿ ಮಾಡಲು ಕ್ರಮ ವಹಿಸಬೇಕೆಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿದ ಎ.ಪಿ.ಎಂ.ಸಿ ಕಾರ್ಯದರ್ಶಿ ರವಿಕುಮಾರ್, ಮೂರು ದಿನಗಳೊಳಗಾಗಿ ಟಮೋಟೋ ರಾಶಿಯನ್ನು ತೆರವುಗೊಳಿಸಿಕೊಡುವುದಾಗಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಕೋವಿಡ್-೧೯ ೨ನೇ ಅಲೆಯನ್ನು ಸಮರ್ಪಕವಾಗಿ ಎದರಿಸಲು ಮುನ್ನೆಚ್ಚರಿಕೆ ಕ್ರಮವಾಗಿ ಕೊಂಡರಾಜನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ವಿಜಯನಗರ ವಾರ್ಡ್‌ನಲ್ಲಿ ೨ನೇ ಬಾರಿಗೆ ಸ್ಯಾನಿಟೈಜರ್ ಸಿಂಪಡಣೆ ಮಾಡಲಾಯಿತು.