ರಸ್ತೆ ಬದಿ ಗಿಡಕಂಟೆಗಳ ಕಟಾವಿಗೆ ಮನವಿ

ಬ್ಯಾಡಗಿ,ನ.9- ಪಟ್ಟಣದ ವ್ಯಾಪ್ತಿಯಲ್ಲಿ ಬರುವ ಛತ್ರ ಗ್ರಾಮಕ್ಕೆ ತೆರಳುವ ರಸ್ತೆಯು ತಿರುವುಗಳಿಂದ ಕೂಡಿದ್ದಲ್ಲದೇ ಎರಡು ಬದಿಗಳಲ್ಲಿ ಬೆಳೆದಿರುವ ಗಿಡಕಂಟಿಗಳಿಂದ ಸಾರ್ವಜನಿಕರಿಗೆ ಬಹಳಷ್ಟು ತೊಂದರೆಯಾಗುತ್ತಿದ್ದು, ರಸ್ತೆಯ ಮದ್ಯೆ ಹಂಪ್ಸ್ ಹಾಕಿ, ಗಿಡಕಂಟಿಗಳ ಕಟಾವು ಮಾಡುವಂತೆ ಸ್ಥಳೀಯ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಅಲ್ಲಿನ ನಿವಾಸಿಗಳು ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಈ ಕುರಿತು ಮಾತನಾಡಿದ ವೀರಭದ್ರಗೌಡ ಹೊಮ್ಮರಡಿ, ಛತ್ರ ಗ್ರಾಮಕ್ಕೆ ತೆರಳುವ ರಸ್ತೆಯು ಬಹಳಷ್ಟು ಕಿರಿದಾಗಿದ್ದು, ಎರಡು ಬದಿಗಳಲ್ಲಿ ಗಿಡಕಂಟಿಗಳು ಹೆಚ್ಚಾಗಿ ಬೆಳೆದಿದ್ದರಿಂದ ರಸ್ತೆಯಲ್ಲಿ ಬರುವ ವಾಹನಗಳು ಕಾಣದೇ ಅಪಘಾತಗಳು ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿದೇ. ಅಲ್ಲದೇ ದಿನನಿತ್ಯ ಈ ರಸ್ತೆಯಲ್ಲಿ ನೂರಾರು ಜನರು ವಾಯು ವಿಹಾರಕ್ಕೆಂದು ತೆರಳುತ್ತಿದ್ದು, ಏಕಾಏಕಿ ಬರುವ ವಾಹನ ಗಳಿಂದ ಅಪಾಯವನ್ನು ಎದುರಿಸುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ವಹಿಸಿ ರಸ್ತೆಯ ಮದ್ಯೆ ಹಾಗೂ ತಿರುವುಗಳಲ್ಲಿ ಹಂಪ್ಸ್ ಹಾಕಿ, ಗಿಡಕಂಟಿಗಳ ಕಟಾವು ಮಾಡಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರೋಹಿತ್ ರಾಯ್ಕರ, ಮುರುಗೇಶ ಮೋಟೆಬೆನ್ನೂರ, ಸಿ.ಎನ್. ಬಣಕಾರ, ಬಸವರಾಜ ಬನ್ನಿಹಟ್ಟಿ, ಮಲ್ಲಪ್ಪ ಹುಚಗೊಂಡರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.