ರಸ್ತೆ ನಿರ್ಮಾಣಕ್ಕೆ ರೈತರ ವಿರೋಧ

ಶಿಗ್ಗಾವಿ,ಏ10 : ಜಮೀನಿಗೆ ನಡೆದಾಡಲು ಬಿಟ್ಟು ಕಾಲು ದಾರಿಯನ್ನು ಸರ್ಕಾರದವರು ವಿಸ್ತರಿಸಿ ಡಾಂಬರೀಕರಣ ಮಾಡಲು ಮುಂದಾಗಿದ್ದಾರೆ. ಇದರಿಂದ ನಾವು ಕೃಷಿ ಜಮೀನು ಕಳೆದುಕೊಳ್ಳಬೇಕಾಗುತ್ತದೆ. ಮುಂದೆ ನಮ್ಮ ಸಂಸಾರದ ಗತಿಯೇನು ಎಂದು ಗ್ರಾಮದ ರೈತರು ಮತ್ತು ಅಧಿಕಾರಿಗಳ ಮಧ್ಯೆ ಮಾತುಕತೆ ನಡೆದು ರಸ್ತೆ ನಿರ್ಮಾಣಕ್ಕೆ ಕೆಲ ರೈತರು ವಿರೋಧ ವ್ಯಕ್ತಪಡಿಸಿದ ಘಟನೆ ತಾಲೂಕಿನ ಹಿರೇಮಣಕಟ್ಟಿ ಹಾಗೂ ಬೆಳಗಲಿ ಸಮೀಪ ಬರುವ ದರ್ಗಾದ ಹಿಂಭಾಗದಲ್ಲಿ ನಡೆಯಿತು.

ಅಲ್ಲಿಯ ಜಮೀನಿನ ಕೆಲವು ರೈತರು ಹೇಳುವ ಪ್ರಕಾರ ಈ ರಸ್ತೆಯ ಸಮಸ್ಯೆ ಸುಮಾರು 80 ವರ್ಷಗಳಿಂದ ಇದ್ದು  ಈ ದಾರಿಯನ್ನು ರೈತರ ಅನುಕೂಲಕ್ಕಾಗಿ ಬಿಟ್ಟಿದ್ದರು. ಈ ರಸ್ತೆಯ ಬಗ್ಗೆ ಯಾವುದೇ ನಕಾಶೆ ಅಥವಾ ದಾಖಲೆಗಳಲ್ಲಿ ಇರುವುದಿಲ್ಲ. ಮಾನವೀಯತೆಯ ದೃಷ್ಟಿಯಿಂದ ಸ್ವಯಂ ಆಗಿ ರೈತರು ಬಿಟ್ಟಿದ್ದಾರೆ. ಆದರೆ ಇಂದು ಕೇಂದ್ರ ಸರಕಾರದ ಯೋಜನೆಯಡಿಯಲ್ಲಿ ರಸ್ತೆಯನ್ನು ಡಾಂಬರೀಕಣ ಮಾಡಲು ಸರಕಾರದವರು ಹೊರಟಿದ್ದು, ನಮಗೆ ಪರ್ಯಾಯ ಜಮೀನು ನೀಡಿ ರಸ್ತೆ ಮಾಡಿ ಎಂದು ತಡೆಯೊಡ್ಡಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲಿರುವ ಜಮೀನಿನ ಮಾಲಕರು ಕಡಿಮೆ ಜಮೀನು ಹೊಂದಿದ್ದು ಅದನ್ನು ರಸ್ತೆಗೆ ಕೊಟ್ಟರೆ ಜಮೀನಿನ ಬೆಳೆಯನ್ನೇ ಅವಲಂಬಿಸಿರುವ ನಾವುಗಳು ಎಲ್ಲಿ ಹೋಗೋಣ? ನಾವು ಜಮೀನು ಕೊಟ್ಟರೆ ನಮಗೆ ಪರಿಹಾರವಾಗಿ ಬೇರೆ ಕಡೆಗೆ ಜಮೀನು ಸಿಗುವ ಅವಕಾಶವಿಲ್ಲದ ಕಾರಣ ನಾವು ಜಮೀನು ಕಳೆದುಕೊಳ್ಳಲು ಸಿದ್ದರಿಲ್ಲ ಎಂದು ಕೆಲ ರೈತರು ವಾದಿಸಿದರೆ ಇನ್ನು ಕೆಲ ರೈತರು ಪರ್ಯಾಯ ರಸ್ತೆ ಇದೆ ಅದನ್ನು ಬಳಸಿಕೊಳ್ಳಿ ಎಂದರು.

ಇನ್ನು ಈ ರಸ್ತೆಗೆ ಸಂಭಂದಿಸಿದಂತೆ ಈ ರಸ್ತೆಯು ಕೊನೆಗೆ ಗುಜರಾತ ಅಂಬುಜಾ ಕಂಪನಿಗೆ ನೇರವಾಗಿ ಸಂಪರ್ಕಿಸುವುದರಿಂದ ಈ ರಸ್ತೆಯನ್ನು ನಿರ್ಮಿಸಿ ಪರೋಕ್ಷವಾಗಿ ಅಂಬುಜಾ ಕಂಪನಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ ಎಂಬ ಗುಮಾನಿಯನ್ನೂ ಸಹಿತ ರೈತರು ವ್ಯಕ್ತಪಡಿಸಿದ್ದು ಬಡ ರೈತರ ಜಮೀನನ್ನು ಕಸಿದುಕೊಂಡು ಉಳ್ಳವರಿಗೆ ಅನುಕೂಲ ಮಾಡಿಕೊಡುವ ವ್ಯವಸ್ಥೆಯನ್ನು ಸರ್ಕಾರವೇ ನಿರ್ಮಾಣ ಮಾಡಿದೆ ಎಂದು ಅಲ್ಲಿಯ ರೈತರು ಆರೋಪಿಸಿದರು.
ಸ್ಥಳಕ್ಕೆ ತಹಶೀಲ್ದಾರ ಮಂಜುನಾಥ ಮುನ್ನೋಳ್ಳಿ ಸಿಪಿಐ ಬಸವರಾಜ ಹಳಬಣ್ಣವರ, ಹಾಗೂ ಸಂಭಂದಿಸಿದ ವಿವಿಧ ಇಲಾಖೆಯ ಅಧಿಕಾರಿಗಳು ರಸ್ತೆ ನಿರ್ಮಾಣದ ಸ್ಥಳಕ್ಕೆ ಬೇಟಿ ನೀಡಿ ವಿರೋಧ ವ್ಯಕ್ತಪಡಿಸಿದ ರೈತರ ಮನವೋಲಿಸಲು ಪ್ರಯತ್ನಿಸಿದರೂ ರೈತರು ಒಪ್ಪಲಿಲ್ಲ.

ಬಾಕ್ಸ ಸುದ್ದಿ ಃ ನಾನು ಈಗಾಗಲೇ ವಿರೋಧ ವ್ಯಕ್ತ ಪಡಿಸುತ್ತಿರುವ ರೈತರ ಮನವೋಲಿಸುವ ಕೆಲಸ ಮಾಡಿದ್ದೆನೆ ಆದರೆ ಅವರು ಒಪ್ಪಿಲ್ಲ ಕಡಿಮೆ ಜಮಿನು ಇದೆ ಇದನ್ನು ಕೊಟ್ಟರೆ ನಮ್ಮ ಜೀವನ ಬಿದಿ ಪಾಲುಗುತ್ತದೆ ಎನ್ನುತ್ತಿದ್ದಾರೆ ಆದರಿಂದ ಸಂಬಂದಿಸಿದ ಅಧಿಕಾರುಗಳು ಹಾಗೂ ಗೃಹ ಸಚಿವರು ಮದ್ಯಸ್ಥಿಕೆ ವಹಿಸಿ ರೈತರಿಗೆ ನ್ಯಾಯ ಒದಗಿಸುವ ಕಾರ್ಯ ಮಾಡಬೇಕಿದೆ
ಮಾರುತಿ ವಾಲ್ಮೀಕಿ ಉಪಾಧ್ಯಕ್ಷರು ಹಿರೇಮಣಕಟ್ಟಿ ಗ್ರಾಮ ಪಂಚಾಯತ