ರಸ್ತೆ ನಿರ್ಮಾಣಕ್ಕೆ ಮುಂದಾದ ರೇಲ್ವೆ ಅಧಿಕಾರಿಗಳು

ಬ್ಯಾಡಗಿ,ಏ28: ಪಟ್ಟಣದ ಹೊರವಲಯದಲ್ಲಿರುವ ಬ್ಯಾಡಗಿ-ಮೋಟೆಬೆನ್ನೂರ ರಸ್ತೆಯ ಮಾರ್ಗದಲ್ಲಿ ನಿರ್ಮಿಸಲಾಗುತ್ತಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿಯ ಹಿನ್ನಲೆಯಲ್ಲಿ ವಾಹನಗಳ ಸಂಚಾರಕ್ಕೆ ಪಕ್ಕದಲ್ಲಿ ನಿರ್ಮಿಸಿರುವ ಪರ್ಯಾಯ ರಸ್ತೆಯ ತಗ್ಗು, ದಿಣ್ಣೆಗಳಿಗೆ ಕೊನೆಗೂ ಮುಕ್ತಿ ಸಿಕ್ಕಿದ್ದು, ಸುಸಜ್ಜಿತ ರಸ್ತೆ ನಿರ್ಮಾಣಕ್ಕೆ ರೈಲ್ವೆ ಇಲಾಖೆಯ ಅಧಿಕಾರಿಗಳು ಮುಂದಾಗಿದ್ದಾರೆ.
ಕಳೆದ ಹಲವಾರು ತಿಂಗಳುಗಳಿಂದ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟು ಸಂಚಾರಕ್ಕೆ ಅವ್ಯವಸ್ಥೆ ಉಂಟಾಗಿದ್ದರೂ ಯಾವುದೇ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ರಸ್ತೆ ದುರಸ್ತಿಗೆ ಮುಂದಾಗದೇ ನಿರ್ಲಕ್ಷ್ಯ ವಹಿಸಿರುವುದನ್ನು ಖಂಡಿಸಿ, ರಾಜ್ಯ ಭ್ರಷ್ಟಾಚಾರ ವಿರೋಧಿ ಜನಾಂದೋಲನ ನ್ಯಾಸ ಘಟಕದ ಸಂಚಾಲಕ ಮಲ್ಲೇಶಪ್ಪ ಚಿಕ್ಕಣ್ಣನವರ ರೈಲ್ವೆ ಇಲಾಖೆಯ ಡೆಪ್ಯೂಟಿ ಚೀಫ್ ಇಂಜಿನೀಯರ್ ಕನ್ಸಸ್ಟ್ರಕ್ಷನ್, ಬೆಂಗಳೂರ ಕಂಟೋನ್ಮೆಂಟ್ ಇವರಿಗೆ ಪತ್ರ ಬರೆದು ಒತ್ತಾಯಿಸಿದ್ದಲ್ಲದೇ ಈ ಬಗ್ಗೆ ತುರ್ತು ಕ್ರಮ ವಹಿಸದೇ ಇದ್ದಲ್ಲೇ ರೈಲ್ವೆ ಗೇಟ್’ಗೆ ಬೀಗ ಜಡಿದು ವಾಹನಗಳ ಸಂಚಾರಕ್ಕೆ ತಡೆ ನಡೆಸಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದ್ದರು.
ಅಧಿಕಾರಿಗಳ ಸ್ಪಂದನೆ..!!
ಬ್ಯಾಡಗಿ ಮೋಟೆಬೆನ್ನೂರ ಮಾರ್ಗದಲ್ಲಿ ನಿರ್ಮಿಸಲಾಗುತ್ತಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿ ಕುಂಟುತ್ತಾ ಸಾಗಿದ್ದು ವಾಹನಗಳ ಸಮರ್ಪಕ ಸಂಚಾರಕ್ಕೆ ಪಕ್ಕದಲ್ಲಿಯೇ ನಿರ್ಮಿಸಿರುವ ಪರ್ಯಾಯ ರಸ್ತೆಯು ಕಳಪೆ ಮಟ್ಟದಲ್ಲಿದ್ದು, ಅಲ್ಲಿ ತಗ್ಗು ದಿಣ್ಣೆಗಳ ಅವ್ಯವಸ್ಥೆಯ ಕಾರಣ ವಾಹನಗಳ ಸಂಚಾರದಿಂದ ಸಾರ್ವಜನಿಕರು ಸಹ ನೋವು ಅನುಭವಿಸುವಂತಾಗಿತ್ತು. ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿ ಸಮರ್ಪಕ ಸಂಚಾರಕ್ಕೆ ಗುಣಮಟ್ಟದ ರಸ್ತೆಯ ನಿರ್ಮಿಸಲು ಮುಂದಾಗಿದ್ದು ಸ್ವಾಗತಾರ್ಹ ಎಂದರು.