ರಸ್ತೆ ನಿರ್ಮಾಣಕ್ಕೆ ಅನುದಾನದ ಕೊರತೆ : ಗಮನಹರಿಸುವರೆ ಶಾಸಕ ಕೆ.ಬಿ.ಅಶೋಕನಾಯ್ಕ್?

ಶಿವಮೊಗ್ಗ, ಸೆ. 22: ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಅಬ್ಬಲಗೆರೆ ಗ್ರಾಮ
ಪಂಚಾಯ್ತಿ ವ್ಯಾಪ್ತಿಯ ಕೆ.ಹೆಚ್.ಬಿ. ಪ್ರೆಸ್ ಕಾಲೋನಿಯ ಸ್ವಾಮಿ ವಿವೇಕಾನಂದ ಹಾಗೂ
ಭಗತ್ ಸಿಂಗ್ ಮುಖ್ಯ ರಸ್ತೆಗಳು, ಗುಂಡಿ-ಗೊಟರು ಬಿದ್ದು ಜನ-ವಾಹನ ಸಂಚಾರ ದುಸ್ತರವಾಗಿ
ಪರಿಣಮಿಸಿದೆ.
ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ಸ್ವಾಮಿ ವಿವೇಕಾನಂದ ಮುಖ್ಯ ರಸ್ತೆ
ಅಭಿವೃದ್ದಿಗೆ ಕರ್ನಾಟಕ ನೀರಾವರಿ ನಿಗಮದ ಮೂಲಕ ಕ್ರಮಕೈಗೊಂಡಿದ್ದಾರೆ. ಇತ್ತೀಚೆಗೆ
ನೀರಾವರಿ ನಿಗಮದ ಎಂಜಿನಿಯರ್ ರವರು ರಸ್ತೆ ಅಭಿವೃದ್ದಿಗೆ ಸಂಬಂಧಿಸಿದಂತೆ ಪರಿಶೀಲನೆ
ನಡೆಸಿದ್ದಾರೆ.
ಈ ನಡುವೆ ಭಗತ್ ಸಿಂಗ್ ರಸ್ತೆ ಅಭಿವೃದ್ದಿಗೆ ಎನ್.ಆರ್.ಇ.ಜಿ. ಯೋಜನೆಯಡಿ ಅನುದಾನ
ಮಂಜೂರಾಗಿದೆ. ಕಾಮಗಾರಿ ಆರಂಭಕ್ಕೆ ಅನುಮತಿ ದೊರಕಿದೆ. ಸದರಿ ರಸ್ತೆಯು ಸರಿಸುಮಾರು
140 ಮೀಟರ್ ಉದ್ದವಿದೆ. ಆದರೆ 90 ಮೀಟರ್ ಉದ್ದದ ರಸ್ತೆ ಅಭಿವೃದ್ದಿಗೆ ಮಾತ್ರ ಅನುದಾನ
ದೊರಕಿದೆ ಎಂದು ಗ್ರಾಮ ಪಂಚಾಯ್ತಿ ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ ಉಳಿದ ಸರಿಸುಮಾರು 30 – 40 ಮೀಟರ್ ಉದ್ದದ ರಸ್ತೆಯು ಅಭಿವೃದ್ದಿಯಿಂದ
ವಂಚಿತವಾಗುವಂತಾಗಿದೆ. ಈಗಾಗಲೇ ಸದರಿ ರಸ್ತೆಯು ಗುಂಡಿ-ಗೊಟರು ಬಿದ್ದು ಜನ-ವಾಹನ
ಸಂಚಾರ ದುಸ್ತರವಾಗಿ ಪರಿಣಮಿಸಿದೆ. ಸಾಕಷ್ಟು ತೊಂದರೆ ಉಂಟಾಗುತ್ತಿದೆ.
ಅರ್ಧಂಬರ್ಧ ರಸ್ತೆ ಅಭಿವೃದ್ದಿ ಕಾಮಗಾರಿಯಿಂದ ಮತ್ತಷ್ಟು ತೊಂದರೆ ಪಡುವಂತಾಗುತ್ತದೆ.
ಈ ಹಿನ್ನೆಲೆಯಲ್ಲಿ ಬಾಕಿ ಉಳಿಯುವ ಸುಮಾರು 40 ಮೀಟರ್ ಉದ್ದದ ರಸ್ತೆ ಅಭಿವೃದ್ದಿಗೆ
ಶಾಸಕ ಕೆ.ಬಿ.ಅಶೋಕನಾಯ್ಕ್ ಅವರು, ತಮ್ಮ ಶಾಸಕರ ನಿಧಿಯ ಮೂಲಕ ಅಗತ್ಯ
ಕ್ರಮಕೈಗೊಳ್ಳಬೇಕು ಎಂದು ನಿವಾಸಿಗಳು ಮನವಿ ಮಾಡಿದ್ದಾರೆ.