ರಸ್ತೆ ದುರಸ್ಥಿಗೆ ಗ್ರಾಮಸ್ಥರ ಆಗ್ರಹ

ಕೋಲಾರ,ಜೂ.೮- ಇತ್ತೀಚೆಗೆ ಬಿದ್ದಿರುವ ಮಳೆಯಿಂದಾಗಿ ೬೦ ವರ್ಷಗಳಿಂದ ಓಡಾಡುತ್ತಿದ್ದ ರಸ್ತೆ ಮುಚ್ಚಿಹೋಗಿದ್ದು ತಮ್ಮ ದೈನಂದಿನ ಕೆಲಸಗಳಿಗೆ ತೆರಳಲು ಪರದಾಡುವ ಸ್ಥಿತಿ ಉಂಟಾಗಿದೆ. ಕೊಡಲೇ ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ಸರಿಪಡಿಸುವಂತೆ ಬಂಗಾರಪೇಟೆ ತಾಲ್ಲೂಕಿನ ಮಾಗೇರಿ ಗ್ರಾಮದ ನಿವಾಸಿಗಳು ಒತ್ತಾಯಿಸಿದ್ದಾರೆ.
ಸರಾಗವಾಗಿ ಹರಿದುಹೋಗುತ್ತಿದ್ದ ಮಳೆ ನೀರು ಕಾಲುವೆಯನ್ನು ಗ್ರಾಮದ ಕೆಲವರು ಮುಚ್ಚಿದ ಪರಿಣಾಮವಾಗಿ ರಸ್ತೆಯಲ್ಲಿ ನೀರು ಶೇಖರಣೆಗೊಂಡು ನಿವಾಸಿಗಳು ಓಡಾಟಕ್ಕೆ ತೊಂದರೆ ಉಂಟಾಗಿದೆ. ಗ್ರಾಮದ ಹೊರವಲಯದಲ್ಲಿ ನಾಲ್ಕು ಐದು ಕುಟುಂಬಗಳು ಸುಮಾರು ೭೦ ವರ್ಷಗಳಿಂದ ವಾಸವಾಗಿದ್ದೇವೆ. ೭೦ ವರ್ಷಗಳಿಂದಲೂ ಈಗಿರುವ ಸರ್ಕಾರಿ ರಸ್ತೆಯಲ್ಲಿ ಸಂಚಾರ ನಡೆಸುತ್ತಿದ್ದೇವೆ. ಓಡಾಟ ನಡೆಸುತ್ತಿದ್ದ ಸರ್ಕಾರಿ ರಸ್ತೆ ಪಕ್ಕದಲ್ಲಿ ಕಾಲುವೆ ಹಾದು ಹೋಗಿದ್ದು ಮಳೆ ನೀರು ಸರಾಗವಾಗಿ ಹರಿದು ಚೆಕ್ ಡ್ಯಾಂನಲ್ಲಿ ಶೇಖರಣೆಯಾಗುತ್ತಿತ್ತು.
ಆದರೆ ಇತ್ತೀಚೆಗೆ ಸರ್ಕಾರಿ ರಸ್ತೆ ಪಕ್ಕದ ಜಮೀನನ್ನು ಗ್ರಾಮದ ಚಿನ್ನಪ್ಪ ಹಾಗೂ ಅವರು ಮಕ್ಕಳು ಸರ್ಕಾರದಿಂದ ಮಂಜೂರು ಮಾಡಿಸಿಕೊಂಡು ರಸ್ತೆಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಅಲ್ಲದೇ ರಸ್ತೆಯನ್ನು ಬಂದ್ ಮಾಡಿದ್ದಾರೆ ಇದರಿಂದಾಗಿ ಚೆಕ್ ಡ್ಯಾಂ ಗೆ ಹೋಗುತ್ತಿದ್ದ ಮಳೆ ನೀರು ರಸ್ತೆಯಲ್ಲಿ ನಿಂತು ನಿವಾಸಿಗಳು ಓಡಾಟ ನಡೆಸಲು ಅಡ್ಡಿಯಾಗಿದೆ.
ರಸ್ತೆ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರ್ ಅವರಿಗೆ ದೂರು ನೀಡಿರುವ ನಿವಾಸಿಗಳು ರಸ್ತೆಯನ್ನು ಸರಿಪಡಿಸುವಂತೆ ಮನವಿ ಮಾಡಿದರು. ಸ್ಥಳಕ್ಕೆ ಬಂಗಾರಪೇಟೆ ತಹಶೀಲ್ದಾರ್ ಬಂದು ಪರಿಶೀಲನೆ ಮಾಡಿ ಸರ್ವೇ ನಡೆಸಿ ರಸ್ತೆ ದುರಸ್ತಿ ಪಡಿಸುವುದಾಗಿ ಹೇಳಿ ಹೋಗಿದ್ದಾರೆ ಸಮಸ್ಯೆ ಮಾತ್ರ ಬಗೆಹರಿದಿಲ್ಲ ಎಂದು ನಿವಾಸಿ ಕೃಷ್ಣಪ್ಪ ಹೇಳಿದರು.
ನಾವು ಪ್ರತಿನಿತ್ಯ ಓಡಾಡಲು ಇರುವುದು ಇದೊಂದೇ ರಸ್ತೆ, ಮಳೆ ಬಂದರೆ ಮನೆಯಿಂದ ಹೊರಗಡೆ ಬರದಂತೆ ಪರಿಸ್ಥಿತಿ ಉಂಟಾಗಿದೆ ಕೆಲಸಕ್ಕೆ ಶಾಲೆಗಳಿಗೆ ಹೋಗುಬೇಕಾದರೆ ಕೆಸರು ಗದ್ದೆ ಆಥವಾ ಎಂಟು ಹತ್ತು ಅಡಿ ನೀರಿನಲ್ಲಿ ಸರ್ಕಸ್ ಮಾಡಿಕೊಂಡು ಹೋಗಬೇಕಾಗುತ್ತದೆ ಸಂಬಂಧಪಟ್ಟ ಅಧಿಕಾರಿಗಳು ಕೊಡಲೇ ರಸ್ತೆಯನ್ನು ಸರಿಪಡಿಸಿ ಓಡಾಡಲು ಅನುಕೂಲ ಮಾಡಿಕೊಟ್ಟರೆ ಸಾಕು ಎಂದು ಮಹಿಳಾ ನಿವಾಸಿ ಮಂಜುಳಮ್ಮ ಹೇಳಿದ್ದಾರೆ.