
ಕೋಲಾರ,ಆ.೯- ಬೇತಮಂಗಲ ಮತ್ತು ಕೋಲಾರದ ಮುಖ್ಯ ರಸ್ತೆಯನ್ನು ಸರಿಪಡಿಸುವಂತೆ ಆಗ್ರಹಿಸಿ, ನಾಳೆ ಗುರುವಾರ ಬೆಳಗ್ಗೆ ೧೧ ಗಂಟೆಗೆ ನಡುಪಳ್ಳಿ ಗ್ರಾಮದ ಬಳಿ ರಸ್ತೆ ತಡೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ನಮ್ಮ ಕೋಲಾರ ರೈತ ಸಂಘದ ಜಿಲ್ಲಾಧ್ಯಕ್ಷ ಕೋಟಿಗಾನಹಳ್ಳಿ ಗಣೇಶ್‌ಗೌಡ ತಿಳಿಸಿದ್ದಾರೆ.
ನಗರದಲ್ಲಿ ” ನಮ್ಮ ಕೋಲಾರ ರೈತ ಸಂಘ “ದ ಸಭೆಯಲ್ಲಿ ಅವರು ಮಾತನಾಡಿ, ಕಳೆದ ಮೂರು ವರ್ಷಗಳಿಂದ ಕೋಲಾರ ಬೇತಮಂಗಲ ಮುಖ್ಯ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದ್ದು, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೂ ತಂದು ಅನೇಕ ಬಾರಿ ಮನವಿಗಳನ್ನು ಸಲ್ಲಿಸಿದ್ದರೂ ಸಹ ಯಾವುದೇ ಸ್ಪಂದನೆ ವ್ಯಕ್ತವಾಗಿಲ್ಲ ಎಂದು ದೂರಿದರು.
ಅಧಿಕಾರಿಗಳನ್ನು ಪ್ರಶ್ನಿಸಿದ್ದರೆ ಕಳೆದ ಮೂರು ವರ್ಷಗಳಿಂದಲೂ ಸಹ ಗುತ್ತಿಗೆದಾರರಿಗೆ ಟೆಂಡರ್ ಆಗಿದ್ದು, ಶೀಘ್ರದಲ್ಲಿ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು ಎಂದು ಮಾತಿನ ಮೂಲಕವೇ ವರ್ಷಗಳನ್ನು ಕಳೆಯುತ್ತಿದ್ದಾರೆ ಹೊರತಾಗಿ ಯಾವೂದೇ ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ರಸ್ತೆ ತಡೆ ಹಮ್ಮಿಕೊಳ್ಳುವ ಮೂಲಕ ಜಿಲ್ಲಾಡಳಿತ ಗಮನ ಸೆಳೆಯುವುದು ಅನಿವಾರ್ಯವಾಗಿದೆ ಎಂದಿದ್ದಾರೆ.
ಪ್ರತಿಭಟನೆಯಲ್ಲಿ ಸುಮಾರು ನೂರಕ್ಕೂ ಹೆಚ್ಚು ಮಂದಿ ಸುತ್ತಮುತ್ತಲಿನ ಗ್ರಾಮಸ್ಥರು ರೈತರು ರಸ್ತೆ ತಡೆಯ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದ ಅವರು, ಮನವಿಯ ಪತ್ರವನ್ನು ಸ್ಥಳದಲ್ಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ನಮ್ಮ ಕೋಲಾರ ರೈತ ಸಂಘದ ಮುಖಂಡರಾದ ಕೆಂಬೋಡಿ ಕೃಷ್ಣೇಗೌಡ, ಕೆಂಬೋಡಿ ರವಿ, ಕಾಮದೇನಹಳ್ಳಿ ವೆಂಕಟಾಚಲಪತಿ, ವೆಂಕಟರಮಣಪ್ಪ, ನಡುಪಲ್ಲಿ ತ್ಯಾಗರಾಜ್ ಇದ್ದರು.