ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳದಿದ್ದರೆ ಪ್ರತಿಭಟನೆ

ಬ್ಯಾಡಗಿ, ಮೇ27: ತಾಲೂಕಿನ ಬನ್ನಿಹಟ್ಟಿಯಿಂದ ಕದರಮಂಡಲಗಿ ಮಾರ್ಗವಾಗಿ ರಾಣೇಬೆನ್ನೂರಿಗೆ ತೆರಳುವ ರಸ್ತೆಯು ಸೇರಿದಂತೆ ಗ್ರಾಮದಲ್ಲಿರುವ ವಿವಿಧ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟು ಸಂಚಾರಕ್ಕೆ ಬಹಳಷ್ಟು ತೊಂದರೆಯಾಗಿದ್ದು, ಈ ಬಗ್ಗೆ ಚುನಾಯಿತ ಜನಪ್ರತಿನಿಧಿಗಳು ಕಂಡು ಕಾಣದಂತೆ ನಿರ್ಲಕ್ಷ್ಯ ವಹಿಸಿರುವುದನ್ನು ಗ್ರಾಮದ ಮುಖಂಡ ನ್ಯಾಯವಾದಿ ಡಿ.ಎಚ್.ಬುಡ್ಡನಗೌಡ್ರ ಖಂಡಿಸಿದ್ದು, ಸಂಬಂಧಪಟ್ಟ ಇಲಾಖೆಯವರು ಕೂಡಲೇ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಬೇಕು. ಇಲ್ಲದಿದ್ದರೆ ರಸ್ತೆ ಬಂದ್ ಮಾಡಿ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ಎಚ್ಚರಿಸಿದರು.
ರಸ್ತೆಗಳ ಅವ್ಯವಸ್ಥೆಯ ಬಗ್ಗೆ ಗ್ರಾಮಸ್ಥರೊಂದಿಗೆ ಸೇರಿ ಶಾಸಕರು ಸೇರಿದಂತೆ ವಿವಿಧ ಚುನಾಯಿತ ಪ್ರತಿನಿಧಿಗಳಿಗೆ ಪ್ರಶ್ನೆ ಮಾಡಿರುವ ಅವರು, ಬನ್ನಿಹಟ್ಟಿ ಗ್ರಾಮದ ಗ್ರಾಮಿಣ ರಸ್ತೆಯ ದುಸ್ಥಿತಿಯಿಂದ ಸಾರ್ವಜನಿಕರು ತೊಂದರೆ ಪಡುವಂತಾಗಿದೆ. ಬನ್ನಿಹಟ್ಟಿಯಿಂದ ಕದರಮಂಡಲಗಿ ಮಾರ್ಗವಾಗಿ ರಾಣಿಬೆನ್ನೂರಿಗೆ ಹೋಗುವ ರಸ್ತೆ, ಗ್ರಾಮದ ವ್ಯಾಪ್ತಿಯಲ್ಲಿರುವ ಸ್ಮಶಾನಕ್ಕೆ ಹೋಗುವ ರಸ್ತೆ, ರೈತರ ಹೊಲಗಳಿಗೆ ಹೋಗುವ ರಸ್ತೆ ಸೇರಿದಂತೆ ಗ್ರಾಮೀಣ ಪ್ರದೇಶಗಳ ರಸ್ತೆಗಳ ದುರಸ್ತಿ ಮಾಡುವುದು ಯಾವಾಗೆಂದು ಕಾಯಬೇಕಾಗಿದೆ ಎಂದು ಆರೋಪಿಸಿದರು.
ದುರಸ್ತಿ ಕಾರ್ಯ ಕೈಗೊಳ್ಳದಿದ್ದರೆ ಪ್ರತಿಭಟನೆ ಅನಿವಾರ್ಯ..!!
ಗ್ರಾಮಸ್ಥ ಹೇಮಂತ ಕರವಜ್ಜನವರ ಮಾತನಾಡಿ, ದಿನನಿತ್ಯ ಈ ಮಾರ್ಗವಾಗಿ ನೂರಾರು ವಾಹನಗಳು ಸಂಚರಿಸುತ್ತವೆ. ಪಾದಚಾರಿಗಳು ಹೊಂಡ ಗುಂಡಿಗಳ ರಸ್ತೆಯಲ್ಲಿ ಸಂಚರಿಸಬೇಕಾಗಿದೆ. ಇನ್ನು ರೈತರು ತಮ್ಮ ಹೊಲಗಳಿಗೆ ಹೋಗುವ ರಸ್ತೆ ಹಾಗೂ ಗ್ರಾಮಸ್ಥರಿಗೆ ಅತ್ಯವಶ್ಯವಾಗಿರುವ ಸ್ಮಶಾನ ರಸ್ತೆಗಳನ್ನು ಅವ್ಯವಸ್ಥೆಯನ್ನು ಜನಪ್ರತಿನಿಧಿಗಳು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಚನ್ನಬಸಪ್ಪ ಹುಚ್ಚಣ್ಣನವರ, ಮಂಜಪ್ಪ ಕೆರಕರ, ಈರನಗೌಡ ಬುಡ್ಡನಗೌಡ್ರ, ಈರನಗೌಡ ನೆಲೋಗಲ್, ಪ್ರಕಾಶ ಚಿಕ್ಕಣಜಿ, ಬಸವರಾಜ ಸರವಂದ, ರವಿ ಕೊರವರ ಉಪಸ್ಥಿತರಿದ್ದರು.