ರಸ್ತೆ ದುರಸ್ತಿಗೆ ಮುಂದಾದ ಟಿಪ್ಪರ್ ಮಾಲಿಕರು

ಲಕ್ಷ್ಮೇಶ್ವರ.ಜ7: ಸೂರಣಗಿ ಮತ್ತು ಬೆಳ್ಳಟ್ಟಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯು ಕಿತ್ತು ಹೋಗಿ ಗುಂಡಿಗಳು ಬಿದ್ದಿದ್ದು, ಹೆದ್ದಾರಿ ಕಿತ್ತು ಹೋಗಿ ವಾಹನ ಸವಾರರು ತಮ್ಮ ವಾಹನ ಚಲಾಯಿಸಲು ಹರಸಾಹಸ ಪಡುವುದರಿಂದ ಬೇಸತ್ತ ಟಿಪ್ಪರ್ ಮಾಲಿಕರೇ ರಸ್ತೆ ದುರಸ್ತಿಗೆ ಮುಂದಾಗಿರುವ ಘಟನೆ ಬುಧವಾರ ನಡೆದಿದೆ.
ಸೂರಣಗಿಯಿಂದ ಬೆಳ್ಳಟ್ಟಿಗೆ ಮಾರ್ಗವಾಗಿ ಕಲ್ಮಲಾಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯು ಹುಲ್ಲೂರಿನ ಹತ್ತಿರ ಹಲವು ಕಡೆಗಳಲ್ಲಿ ಸಂಪೂರ್ಣ ಕಿತ್ತು ಹೋಗಿದ್ದರಿಂದ ಬೈಕ್ ಮತ್ತು ಕಾರು ಇನ್ನಿತರ ವಾಹನ ಸವಾರರು ಕೈಯಲ್ಲಿ ಜೀವ ಹಿಡಿದುಕೊಂಡು ಸಂಚಾರ ಮಾಡುವಂತಾಗಿದೆ. ಪ್ರತಿ ನಿತ್ಯ ಸಾವಿರಾರು ವಾಹನಗಳು ಈ ರಸ್ತೆಯ ಮೇಲೆ ಸಂಚಾರ ಮಾಡುತ್ತವೆ. ಹಲವು ಬೈಕ್ ಸವಾರರು ಗುಂಡಿಯಲ್ಲಿ ಬಿದ್ದು ಕೈಕಾಲು ಮುರಿದುಕೊಂಡಿದ್ದರೂ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ. ಗುತಿಗೆದಾರರು ಕಳೆದ 1 ತಿಂಗಳ ಹಿಂದೆ ಇದೇ ರಸ್ತೆಗೆ ಪಾರ್ಟ್ ಹೋಲ್ ತುಂಬುವ ಕಾರ್ಯವನ್ನು ಬೇಕಾಬಿಟ್ಟಿ ಮಾಡಿದ್ದಾರೆ. ಡಾಂಬರ್ ಕಿತ್ತು ಹೋಗಿದ್ದರು ಇತ್ತ ಗಮನ ಹರಿಸದೆ ಇರುವುದು ಅಧಿಕಾರಿಗಳ ಬೇಜವಾಬ್ದಾರಿಗೆ ಹಿಡಿದ ಕೈಗನ್ನಡಿಯಾಗಿದೆ ಎನ್ನುತ್ತಾರೆ ವಾಹನಗಳ ಮಾಲಿಕರು.
ಈ ಹಿನ್ನೆಲೆಯಲ್ಲಿ ಸ್ವತಃ ಇದರಿಂದ ರೋಸಿ ಹೋದ ಟಿಪ್ಪರ್‍ಗಳ ಮಾಲಿಕರು ಮತ್ತು ಚಾಲಕರು ಸೇರಿ ರಸ್ತೆಗೆ ಮಣ್ಣು ಕಲ್ಲು ಹಾಕಿ ದುರಸ್ತಿಗೆ ಮುಂದಾಗಿದ್ದಾರೆ.