ರಸ್ತೆ ದುರಸ್ತಿಗೆ ಒತ್ತಾಯ

ಬ್ಯಾಡಗಿ,ಏ2: ಪಟ್ಟಣದ ಹೊರವಲಯದಲ್ಲಿರುವ ಬ್ಯಾಡಗಿ- ಮೋಟೆಬೆನ್ನೂರ ರಸ್ತೆಯ ಮಾರ್ಗದಲ್ಲಿ ನಿರ್ಮಿಸಲಾಗುತ್ತಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿಯ ಹಿನ್ನಲೆಯಲ್ಲಿ ವಾಹನಗಳ ಸಂಚಾರಕ್ಕೆ ಪಕ್ಕದಲ್ಲಿ ನಿರ್ಮಿಸಿರುವ ಪರ್ಯಾಯ ರಸ್ತೆಯು ತಗ್ಗು, ದಿಣ್ಣೆಗಳಿಂದ ಕೂಡಿರುವುದರಿಂದ ಬಹಳಷ್ಟು ತೊಂದರೆಯಾಗುತ್ತಿದ್ದು, ಈ ರೈಲ್ವೆ ಇಲಾಖೆಯ ಮೇಲಾಧಿಕಾರಿಗಳು ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಲು ಮುಂದಾಗುವಂತೆ ರಾಜ್ಯ ಭ್ರಷ್ಟಾಚಾರ ವಿರೋಧಿ ಜನಾಂದೋಲನ ನ್ಯಾಸ ಘಟಕದ ಸಂಚಾಲಕ ಮಲ್ಲೇಶಪ್ಪ ಚಿಕ್ಕಣ್ಣನವರ ಒತ್ತಾಯಿಸಿದ್ದಾರೆ.

ಈ ಕುರಿತು ರೈಲ್ವೆ ಇಲಾಖೆಯ ಡೆಪ್ಯೂಟಿ ಚೀಫ್ ಇಂಜಿನೀಯರ್ ಕನ್ಸಸ್ಟ್ರಕ್ಷನ್, ಬೆಂಗಳೂರ ಕಂಟೋನ್ಮೆಂಟ್ ಇವರಿಗೆ ಪತ್ರ ಬರೆದಿರುವ ಅವರು, ಬ್ಯಾಡಗಿ ಪಟ್ಟಣವು ಒಣ ಮೆಣಸಿನಕಾಯಿ ವ್ಯಾಪಾರದಲ್ಲಿ ವಿಶ್ವ ಪ್ರಸಿದ್ಧ ಮಾರುಕಟ್ಟೆಯನ್ನು ಹೊಂದಿದ್ದು, ಪ್ರತಿನಿತ್ಯ ಸಾವಿರಾರು ವಾಹನಗಳು ಬ್ಯಾಡಗಿ ಮೋಟೆಬೆನ್ನೂರ ಮಾರ್ಗವಾಗಿ ಸಂಚರಿಸುತ್ತಿವೆ. ಅಲ್ಲದೇ ಇದೇ ಮಾರ್ಗದಲ್ಲಿ ನಿರ್ಮಿಸಲಾಗುತ್ತಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿ ಕುಂಟುತ್ತಾ ಸಾಗಿದ್ದು ವಾಹನಗಳ ಸಮರ್ಪಕ ಸಂಚಾರಕ್ಕೆ ಬಹಳಷ್ಟು ಅಡ್ಡಿಯುಂಟಾಗಿದೆ. ಪಕ್ಕದಲ್ಲಿ ನಿರ್ಮಿಸಿರುವ ಪರ್ಯಾಯ ರಸ್ತೆಯಲ್ಲಿ ವಾಹನಗಳ ಸಂಚಾರದಿಂದ ಸಾರ್ವಜನಿಕರು ಸಹ ನೋವು ಅನುಭವಿಸುವಂತಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿ ಸಮರ್ಪಕ ಸಂಚಾರಕ್ಕೆ ಗುಣಮಟ್ಟದ ರಸ್ತೆಯ ನಿರ್ಮಿಸುವ ಮೂಲಕ ಆದ್ಯತೆ ನೀಡಬೇಕೆಂದು ಕೋರಿದ್ದಾರೆ.