ರಸ್ತೆ ದುರಸ್ತಿಗೆ ಆಗ್ರಹ


ಲಕ್ಷ್ಮೇಶ್ವರ,ಡಿ.21: ತಾಲೂಕಿನ ಯತ್ನಳ್ಳಿ ಲಕ್ಷ್ಮೇಶ್ವರ ಮಧ್ಯದ ರಸ್ತೆ ಕಳೆದ ಅನೇಕ ವರ್ಷಗಳಿಂದ ಡಾಂಬರೀಕರಣ ಮಾಡದೆ ಇರುವುದರಿಂದ ರಸ್ತೆ ಸಂಪೂರ್ಣ ಹಾಳಾಗಿದೆ.
ಲಕ್ಷ್ಮೇಶ್ವರ ಭಾಗದ ಬಹುತೇಕ ರೈತರ ಜಮೀನುಗಳು ಈ ಭಾಗದಲ್ಲಿಯೇ ಹೆಚ್ಚಾಗಿದ್ದು ಲೋಕೋಪಯೋಗಿ ಇಲಾಖೆಯ ಜಿಲ್ಲಾ ಪ್ರಮುಖ ರಸ್ತೆ ಆಗಿರುವ ಇದು ರೈತರ ಪಾಲಿಗೆ ಕಂಟಕ ಪ್ರಾಯವಾಗಿದೆ.
ಯತ್ನಳ್ಳಿಯಿಂದ ಆರಂಭವಾಗುವ ಈ ರಸ್ತೆಯಲ್ಲಿ ಸುಮಾರು 3 ಕಿಮೀ ಉತ್ತಮವಾಗಿದ್ದು ಮಧ್ಯದಲ್ಲಿನ ರಸ್ತೆ ಸಂಪೂರ್ಣ ಹಾಳಾಗಿ ಚಕ್ಕಡಿ ಎತ್ತು ವಾಹನಗಳು ಅಡ್ಡಾಡದ ಸ್ಥಿತಿಯಲ್ಲಿದೆ ಈಗ ಈ ರಸ್ತೆಯನ್ನು ದುರಸ್ತಿಗೊಳಿಸಲು ಮುಂದಾಗಿದ್ದು ಆದರೆ ಡಾಂಬರೀಕರಣವಾಗುತ್ತದೆಯೋ ಅಥವಾ ಕಚ್ಚಾ ರಸ್ತೆಯಾಗಿ ಉಳಿಯುತ್ತದೆಯೋ ಎಂಬ ಯಕ್ಷಪ್ರಶ್ನೆ ರೈತರ ಕಾಡುತ್ತಿದೆ.
ಮೇಲಾಗಿ ಈ ರಸ್ತೆಯ ಮಧ್ಯ ಬರುವ ಮೂರು ಕಿರು ಸೇತುವೆಗಳ ಮಧ್ಯ ಭಾಗದಲ್ಲಿಯೇ ಕುಸಿತ ಕಂಡಿದ್ದು ಅಪಾಯಕ್ಕೆ ಆಹ್ವಾನ ನೀಡುವಂತಿದೆ.
ಈ ಕುರಿತು ಶೇಖರ ಗೌಡ ಪಾಟೀಲ್ ಅವರು ಕೂಡಲೇ ರಸ್ತೆಯ ದುರಸ್ತಿಗೊಳಿಸಿ ಸೇತುವೆಗಳನ್ನು ಪುನರ್ ನಿರ್ಮಾಣ ಮಾಡದಿದ್ದರೆ ಈ ರಸ್ತೆ ಇದ್ದೂ ಇಲ್ಲದಂತಾಗಿದೆ. ಈ ರಸ್ತೆ ಸಂಪೂರ್ಣ ಸಾರಿಗೆ ಅನುಕೂಲವಾದರೆ ಮಾಡಳ್ಳಿಯಿಂದ ಯತ್ನಳ್ಳಿ ಲಕ್ಷ್ಮೇಶ್ವರಕ್ಕೆ ನೇರ ಸಂಪರ್ಕ ಕಲ್ಪಿಸಿದಂತಾಗುತ್ತದೆ ಆದ್ದರಿಂದ ಲೋಕೋಪಯೋಗಿ ಇಲಾಖೆಯವರು ಈ ರಸ್ತೆಯನ್ನು ಕೂಡಲೇ ದುರಸ್ತಿಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ..