
ಬ್ಯಾಡಗಿ,ಮೇ22: ವಾಹನವೊಂದು ಆಪಘಾತಕ್ಕೀಡಾಗಿದ್ದು ಅದಕ್ಕೆ ರಸ್ತೆತಡೆ (ಹಂಪ್ಸ್) ನಿರ್ಮಿಸದಿರುವುದೇ ಕಾರಣವೆಂದು ಗ್ರಾಮ ಸ್ಥರು ಹಠಾತ್ ಪ್ರತಿಭಟನೆ ನಡೆಸಿದ ಘಟನೆ ತಾಲೂಕಿನ ಬನ್ನಿಹಟ್ಟಿ ಗ್ರಾಮದಲ್ಲಿ ನಡೆದಿದೆ.
ಗ್ರಾಮಸ್ಥರ ಪ್ರತಿಭಟನೆಯಿಂದಾಗಿ ಬ್ಯಾಡಗಿ ರಟ್ಟೀಹಳ್ಳಿ ಮಾರ್ಗದಲ್ಲಿ ಸುಮಾರು 2 ತಾಸಿಗೂ ಅಧಿಕ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಘಟನೆಯಲ್ಲಿ ಗಾಯಗೊಂಡವರು ಸುಣಕಲ್ಲಬಿದರಿ ಗ್ರಾಮದವರಾಗಿದ್ದು ಎಲ್ಲರಿಗೂ ಸ್ಥಳೀಯ ಸಮುದಾಯ ಅರೋಗ್ಯ ಕೇಂದ್ರಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆ ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.
ಘಟನೆ ಹಿನ್ನೆಲೆ:ಸುಣಕಲ್ಲಬಿದರಿ ಗ್ರಾಮದ ಬುಲೆರೋ ವಾಹನವೊಂದು ತಾಲೂಕಿನ ಶಿಡೇನೂರ ಗ್ರಾಮದಲ್ಲಿನ ವಿವಾಹ ಮಹೋತ್ಸವಕ್ಕೆ ವಾಪಸ್ಸಾಗುವ ವೇಳೆಯಲ್ಲಿ ಬನ್ನಿಹಟ್ಟಿ ಗ್ರಾಮದ ಬಳಿ ರಸ್ತೆ ಪಕ್ಕಕ್ಕೆ ಮಗುಚಿದೆ, ಅದರಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು, ಆದರೆ ಅಪಘಾತ ಸುದ್ದಿ ತಿಳಿಯುತ್ತಿದ್ದಂತೆ ರಸ್ತೆಗಿಳಿದ ಗ್ರಾಮಸ್ಥರು ರಸ್ತೆತಡೆ ಹಾಗೂ ಸೂಚನಾ ಫಲಕವಿಲ್ಲದಿರುವುದೇ ಘಟನೆಗೆ ಕಾರಣವೆಂದು ಹಠಾತ್ ಪ್ರತಿಭಟನೆ ನಡೆಸಿದರಲ್ಲದೇ ಸುಮಾರು 2 ತಾಸಿಗೂ ಅಧಿಕ ಕಾಲ ವಾಹನಗಳ ಸಂಚಾರಕ್ಕೆ ಪ್ರತಿಭಟನಾಕಾ ರರು ಅನುಮತಿ ನೀಡಲಿಲ್ಲ.
ಸ್ಥಳಕ್ಕೆ ಸಿಪಿಐ:ಅಪಘಾತ ಹಾಗೂ ಪ್ರತಿಭಟನೆ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಸಿಪಿಐ ಬಸವರಾಜಪ್ಪ ಹಾಗೂ ಸಿಬ್ಬಂದಿ ಆಕ್ರೋಶಗೊಂಡಿದ್ದ ಗ್ರಾಮಸ್ಥರನ್ನು ಸಮಾಧಾನಗೊಳಿಸಲು ಪ್ರಯತ್ನಿಸಿದರಾದರೂ ಯಾವುದೇ ಫಲನೀಡಲಿಲ್ಲ, ಬಳಿಕ ರಸ್ತೆತಡೆ ನಿರ್ಮಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಭರಸವೆ ಪಡೆದ ಬಳಿಕವಷ್ಟೇ ಪ್ರತಿಭಟನೆಯಿಂದ ಹಿಂದೆ ಸರಿದರು.
ಘಟನೆ ಕುರಿತಂತೆ ಬ್ಯಾಡಗಿ ಪೋಲಿಸ್ ಠಾಣೆಯಲ್ಲಿ ವಾಹನ ಚಾಲಕ ಕಿರಣ ಶಿವಕ್ಕನವರ ವಿರುದ್ಧ ನಿರ್ಲಕ್ಷ್ಯತನದ ಚಾಲನೆ ದೂರು ದಾಖಲಾಗಿದ್ದು ತನಿಖೆ ಮುಂದುವರೆದಿದೆ.
ಮಾಜಿ ಶಾಸಕ ವಿರೂಪಾಕ್ಷಪ್ಪ ಭೇಟಿ: ಘಟನೆಯಲ್ಲಿ ಚಿಕ್ಕಮಕ್ಕಳು ಸೇರಿದಂತೆ ನಾಲ್ಕೈದು ಜನರಿಗೆ ಗಾಯಗಳಾಗಿದ್ದು ಅವ ರನ್ನು ಸ್ಥಳೀಯ ತಾಲೂಕಾಸ್ಪತ್ರೆಗೆ ಕಳುಹಿಸಿಕೊಡಲಾಯಿತು, ಈವೇಳೆ ಘಟನಾ ಸ್ಥಳ ಸೇರಿದಂತೆ ಆಸ್ಪತ್ರೆಗೆ ಭೇಟಿ ನೀಡಿದ ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಗಾಯಾಳುಗಳ ಆರೋಗ್ಯ ವಿಚಾರಣೆ ನಡೆಸಿದರು.