ರಸ್ತೆ ತಡೆದು ಕರವೇ ಕಾರ್ಯಕರ್ತರಿಂದ ಪ್ರತಿಭಟನೆ

ಲಕ್ಷ್ಮೇಶ್ವರ, ನ25: ಲಕ್ಷ್ಮೇಶ್ವರದಿಂದ ಹುಬ್ಬಳ್ಳಿಗೆ ಸಂಚರಿಸುವ ಬಸ್ಸುಗಳನ್ನು ಮೊದಲಿನಂತೆ ಶಿರೂರು ಮಾರ್ಗವಾಗಿ ಓಡಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ನೂರಾರು ಕಾರ್ಯಕರ್ತರು ಬುಧವಾರ ಹೊಸ ಬಸ್ ನಿಲ್ದಾಣದ ಎದುರು ರಾಜ್ಯ ಹೆದ್ದಾರಿಯ ಮೇಲೆ ಸುಮಾರು ಮೂರ್ನಾಲ್ಕು ತಾಸು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಗದಗ ವಿಭಾಗದ ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರತಿಭಟನಾ ಸ್ಥಳಕ್ಕೆ ಬಂದು ಪ್ರತಿಭಟನಾ ನಿರತರೊಂದಿಗೆ ಮಾತುಕತೆ ನಡೆಸಿದರು. ಆದರೆ ಪ್ರತಿಭಟನಾಕಾರರು ಶಿರೂರು ಸೇತುವೆ ಸಮೀಪ ಪ್ರಯಾಣಿಕರನ್ನು ಇಳಿಸಿ ಅಲ್ಲಿಂದ ಖಾಲಿ ಬಸ್ಸನ್ನು ಓಡಿಸಿ ಮತ್ತೆ ಪ್ರಯಾಣಿಕರನ್ನು ಕರೆದುಕೊಂಡು ಹೋಗುವ ವ್ಯವಸ್ಥೆಗೆ ಪಟ್ಟು ಹಿಡಿದು ಕುಳಿತರು.
ಆಗ ವಿಭಾಗಿಯ ಸಾರಿಗೆ ಅಧಿಕಾರಿ ಅವರು ಸಂಬಂಧಿಸಿದ ಲೋಕೋಪಯೋಗಿ ಇಲಾಖೆ ಇಂಜಿನಿಯರುಗಳೊಂದಿಗೆ ಮಾತುಕತೆ ನಡೆಸಿದರು. ಆದರೆ ಇಂಜಿನಿಯರು ಇದಕ್ಕೆ ಒಪ್ಪದಿರುವದರಿಂದ ಪ್ರತಿಭಟನೆ ಮತ್ತಷ್ಟು ತೀವ್ರಗೊಂಡಿದ್ದು ಒಂದು ಹಂತದಲ್ಲಿ ಪ್ರತಿಭಟನಾಕಾರರು ರಸ್ತೆಯ ಮೇಲೆ ಟೆಂಟ್ ಹಾಕಿ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂಬ ಸಂದೇಶವನ್ನು ನೀಡುತ್ತಿದ್ದಂತೆಯೇ ಮತ್ತೆ ಪೆÇಲೀಸ್ ಅಧಿಕಾರಿಗಳು ಮತ್ತು ವಿಭಾಗಿಯ ಸಾರಿಗೆ ಅಧಿಕಾರಿ ರಾಜಶೇಖರ್ ಅವರು ಹುಬ್ಬಳ್ಳಿಯ ಮುಖ್ಯ ಕಚೇರಿಯ ಹಿರಿಯ ಅಧಿಕಾರಿಗಳೊಂದಿಗೆ ಸತತ ಸಂಪರ್ಕ ಮಾಡಿ ಕೊನೆಗೆ ಪ್ರತಿಭಟನಾಕಾರರ ಬೇಡಿಕೆಯಂತೆ ಶಿರೂರು ಸೇತುವೆ ಸಮೀಪ ಪ್ರಯಾಣಿಕರನ್ನು ಇಳಿಸಿ ಅಲ್ಲಿಂದ ಮತ್ತೆ ಬಸ್ಸಿನಲ್ಲಿ ಹೋಗುವಂತೆ ವ್ಯವಸ್ಥೆ ಕಲ್ಪಿಸುವುದಾಗಿ ಪ್ರಕಟಿಸುತ್ತಿದ್ದಂತೆ ಕಾರ್ಯಕರ್ತರಲ್ಲಿ ಹರುಷದ ವಾತಾವರಣ ನಿರ್ಮಾಣವಾಯಿತು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಲೋಕೇಶ ಸುತಾರ್ ಮತ್ತು ಬಸವರಾಜ್ ಹೊಗೆಸೊಪ್ಪಿನವರ ಮಾತನಾಡಿ ಸಾರ್ವಜನಿಕರ ಹಿತದೃಷ್ಟಿಯಿಂದ ವೇಳೆ ಮತ್ತು ಹಣ ಅಪವ್ಯಯ ಆಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಕೈಗೊಂಡ ಪ್ರತಿಭಟನೆಗೆ ಕೊನೆಗೂ ಅಧಿಕಾರಿಗಳು ಸಹಮತ ವ್ಯಕ್ತಪಡಿಸುವ ಮೂಲಕ ನಮ್ಮ ಬೇಡಿಕೆ ಈಡೇರಿದಂತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಪ್ರವೀಣ ಗಾಣಿಗೇರ್, ಪ್ರಕಾಶ್ ಕೊಂಚಿಗೇರಿಮಠ, ವಿಜಯ್ ಆಲೂರ, ಗಂಗಾಧರ ಕೊಂಚಿಗೇರಿಮಠ, ಅರುಣ್ ಮೆಕ್ಕಿ, ಗೋವಿಂದಪ್ಪ ಅರಳಿಕಟ್ಟಿ, ಶಂಕರಗೌಡ ಪಾಟೀಲ್, ರವಿಕುಮಾರ್ ಕೋರಿ, ಕೈಸರ್ ಮೊಮ್ಮದ್ ಅಲಿ, ಈರಣ್ಣ ಪೂಜಾರ್, ಫಕಿರೇಶ್ ಅಣ್ಣಿಗೇರಿ, ಮಾಂತೇಶ್ ಗೋಡಿ, ಮೈನು ಮನಿಯಾರ, ಸುರೇಶ್ ಹಟ್ಟಿ, ಆಶಿಫ್ ಮಾಳವಾಡ, ಸೇರಿದಂತೆ ನೂರಾರು ಕಾರ್ಯಕರ್ತರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಪ್ರತಿಭಟನೆಯ ಸಂದರ್ಭದಲ್ಲಿ ಪ್ರತಿಭಟನೆಯ ಕಾವು ಹೆಚ್ಚುತ್ತಿದ್ದಂತೆಯೇ ಸಾರಿಗೆ ಬಸ್ಸುಗಳು ತಟಸ್ಥವಾಗಿ ರಸ್ತೆಯಲ್ಲ ವಾಹನಗಳಿಂದ ತುಂಬಿಕೊಂಡಿದ್ದರಿಂದ ಸುಮಾರು ನಾಲ್ಕು ತಾಸು ಸಾರಿಗೆ ಸಂಪರ್ಕ ಕಡಿತಗೊಂಡಿದ್ದು ವಿದ್ಯಾರ್ಥಿಗಳು ಸಾರ್ವಜನಿಕರು ಪರದಾಡುತ್ತಿದ್ದರು. ಇದೇ ಸಂದರ್ಭದಲ್ಲಿ ಆಗ ಕರವೇ ಕಾರ್ಯಕರ್ತರು ಬಸ್ ನಿಲ್ದಾಣದ ತುಂಬೆಲ್ಲ ಸಾವಿರಾರು ಜನರಿಗೆ ಬಾಳೆಹಣ್ಣು ವಿತರಿಸಿ ಮಾನವೀಯತೆ ಮೆರೆದರು.
ಪಿಎಸ್‍ಐ ಡಿ. ಪ್ರಕಾಶ್ ಅವರ ನೇತೃತ್ವದಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಕ್ರಮ ಕೈಗೊಂಡಿದ್ದರು.