ರಸ್ತೆ ಡಾಂಬರೀಕರಣಕ್ಕೆ ಬಾಬುರಾವ್ ಒತ್ತಾಯ

ರಾಯಚೂರು,ಆ.೨೪:
ನಗರದ ರಾಷ್ಟ್ರೀಯ ಹೆದ್ದಾರಿ-೧೬೭ ಗಂಜ್ ವೃತ್ತದಿಂದ ಹಾಳಾಗಿರುವ ೧೧೦ ಮೀ. ರಸ್ತೆಯನ್ನು ತಕ್ಷಣ ಡಾಂಬರೀಕರಣಗೊಳಿಸಬೇಕು ಎಂದು ಎಪಿಎಂಸಿ ಮಾಜಿ ಉಪಾಧ್ಯಕ್ಷ ಬಾಬುರಾವ್ ತಿಳಿಸಿದ್ದಾರೆ.
ರಾಯಚೂರು ನಗರದ ಮೂಲಕ ರಾಷ್ಟ್ರೀಯ ಹೆದ್ದಾರಿ-೧೬೭ ರಸ್ತೆ ಜಿಲ್ಲಾ ಪೊಲೀಸ್ ಕಚೇರಿಯಿಂದ ಗಂಜ್ ವೃತ್ತದವರೆಗೆ ಸಂಪೂರ್ಣವಾಗಿ ಹಾಳಾಗಿದೆ. ರಸ್ತೆ ಪೂರ್ಣವಾಗಿ ತಗ್ಗು ದಿಣ್ಣೆಗಳಿಂದ ಕೂಡಿದ್ದು, ಸಾರ್ವಜನಿಕ ಸಂಚಾರಕ್ಕೆ ಅಡಚಣೆಯುಂಟಾಗುತ್ತಿದೆ.
ಆ. ೩೧ ರಂದು ಸೈಯದ್ ಶಂಶಾಲಮ್ ಹುಸೇನಿ ದರ್ಗಾ ವಾರ್ಷಿಕ ಉರುಸ್ ಕಾರ್ಯಕ್ರಮವಿದ್ದು, ಈ ರಸ್ತೆಯಲ್ಲಿ ಸಂಚಾರ ಮಾಡಲು ಶೀಘ್ರ ರಸ್ತೆ ದುರಸ್ಥಿಗೊಳಿಸಬೇಕು ಎಂದು ಬಾಬುರಾವ್ ಒತ್ತಾಯಿಸಿದ್ದಾರೆ.
ತಾತ್ಕಾಲಿಕವಾಗಿ ಗಂಜ್ ವೃತ್ತದ ಬಳಿಯಿರುವ ಅಗ್ನಿಶಾಮಕ ಠಾಣೆಯಿಂದ ಚಂದ್ರಬಂಡಾ ರಸ್ತೆವರೆಗೆ ಅಂದಾಜು ೧೧೦ ಮೀ. ರಸ್ತೆಯನ್ನು ತಕ್ಷಣ ಡಾಂಬರೀಕರಣಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿಬಾಬುರಾವ್ ಒತ್ತಾಯಿಸಿದ್ದಾರೆ.