ರಸ್ತೆ ಗುಂಡಿ ಮುಚ್ಚದ ಪಾಲಿಕೆ ವಿರುದ್ಧ ದಿನೇಶ್ ಕಿಡಿ

ಬೆಂಗಳೂರು, ನ.೨- ರಾಜಧಾನಿ ಬೆಂಗಳೂರಿನಲ್ಲಿ ರಸ್ತೆ ಗುಂಡಿ ಸಂಬಂಧ ಬಿಬಿಎಂಪಿ ಆಯುಕ್ತರು ಬರೋಬ್ಬರಿ ಎಂಟು ಬಾರಿ ಗಡುವು ನೀಡಿದರೂ, ಸಮಸ್ಯೆ ಬಗೆಹರಿದಿಲ್ಲ ಎಂದು ಶಾಸಕ ದಿನೇಶ್ ಗುಂಡೂರಾವ್ ಟೀಕಿಸಿದರು.
ನಗರದಲ್ಲಿಂದು ಸುಭಾಶ್ ನಗರ ವಾರ್ಡ್ ಕಾಂಗ್ರೆಸ್ ಮುಖಂಡ ಸತ್ಯ ಟೀಮ್ ಡಿಜಿಆರ್ ಮೂಲಕ ಆಯೋಜನೆ ಮಾಡಿದ್ದ ಕಾರ್ಯಕ್ರಮದಲ್ಲಿ ತಮ್ಮ ಹುಟ್ಟು ಹಬ್ಬದ ಪ್ರಯುಕ್ತ ೧೦೦ ಕ್ಕೂ ಹೆಚ್ಚು ಬಡ ಮಕ್ಕಳಿಗೆ ಕ್ರಿಕೆಟ್ ಬ್ಯಾಟ್ ಕಿಟ್ ಸೇರಿದಂತೆ ಕ್ರೀಡಾ ಸಾಮಗ್ರಿಗಳನ್ನು ವಿತರಣೆ ಮಾಡಿ ಅವರು ಮಾತನಾಡಿದರು.
ನವೆಂಬರ್ ೧೫ ರೊಳಗೆ ರಸ್ತೆ ಗುಂಡಿಗಳನ್ನು ಮುಚ್ಚ ಬೇಕು. ಇಲ್ಲದಿದ್ದರೆ ಅಮಾನತ್ತು ಮಾಡಲಾಗುತ್ತದೆ ಎಂದು ಇಂಜಿನಿಯರ್ ಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಡೆಡ್ ಲೈನ್ ನೀಡಿದ್ದಾರೆ.ಆದರೆ, ಇದು ೮ ನೇ ಬಾರಿಗೆ ಕೊಟ್ಟಿರುವ ಡೆಡ್ ಲೈನ್ ಎಂದರು.
ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಬಿಲ್ ಗಳನ್ನು ನೀಡದೆ ಇರೋದು, ಸಮನ್ವಯತೆಯ ಕೊರತೆ ಯಿಂದ ಬೆಂಗಳೂರಿನ ರಸ್ತೆಗಳು ಹಾಳಾಗಲು ಕಾರಣ. ನಾವು ನಮ್ಮ ಕ್ಷೇತ್ರಗಳಲ್ಲಿ ಅಧಿಕಾರಿಗಳ ಹಿಂದೆ ಬಿದ್ದು ಕೆಲಸ ಮಾಡಿಸುವ ಪರಿಸ್ಥಿತಿ ಇದೆ.
ರಸ್ತೆ ಗುಂಡಿಗಳನ್ನು ಮುಚ್ಚಲು ಎಲ್ಲಾ ಸಹಕಾರ ನೀಡುತ್ತೇವೆ. ಇವರ ಕೈಯಲ್ಲಿ ಎಲ್ಲಾ ಗುಂಡಿಗಳನ್ನ ಮುಚ್ಚಲು ಸಾಧ್ಯವಿಲ್ಲಾ ಶೇಕಡಾ ೭೦ರಷ್ಟು ಮುಚ್ಚಬಹುದು ಎಂದರು.
ಮಕ್ಕಳಿಗೆ ವಿದ್ಯೆ ಜೊತೆಗೆ ಅವರಲ್ಲಿರುವ ಕ್ರೀಡಾ ಆಸಕ್ತಿಯನ್ನು ಗುರುತಿಸಿ, ಸೂಕ್ತ ತರಭೇತಿ ಜೊತೆಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು. ಆಗ ಅವರು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಅವರು ನುಡಿದರು.