ರಸ್ತೆ, ಕಾಲುವೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ

ಬ್ಯಾಡಗಿ,ಸೆ.6: ಪ್ರಧಾನಿ ನರೇಂದ್ರ ಮೋದಿಯವರು ವಿಶ್ವದ ಅಗ್ರಗಣ್ಯ ನಾಯಕರಾಗಿ ದೇಶದ ಅಭಿವೃದ್ಧಿಯ ವಿಚಾರದಲ್ಲಿ ದೊಡ್ಡ ಶಕ್ತಿಯಾಗಿದ್ದಾರೆ. ರಾಜಕೀಯ ರಹಿತವಾಗಿ ಮೋದಿ ಅವರು ಮಾಡುತ್ತಿರುವ ದೇಶ ಸೇವೆಯನ್ನು ನಾವೆಲ್ಲರೂ ಬೆಂಬಲಿಸಿ ದೇಶದ ಸಮಗ್ರ ಅಭಿವೃದ್ದಿಗೆ ಕೈಜೋಡಿಸಬೇಕೆಂದು ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಮನವಿ ಮಾಡಿದರು.
ತಾಲೂಕಿನ ಬನ್ನಿಹಳ್ಳಿ ಹಾಗೂ ಕುಮ್ಮೂರು ಗ್ರಾಮಗಳಲ್ಲಿ ತುಂಗಾ ಮೇಲ್ದಂಡೆ ಯೋಜನೆಯ ವತಿಯಿಂದ ಎಸ್ಸಿ -ಎಸ್ಟಿ ಕಾಲೋನಿಗಳಲ್ಲಿ ತಲಾ 20ಲಕ್ಷ ರೂಗಳ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ರಸ್ತೆ ಮತ್ತು ಕಾಲುವೆ ನಿರ್ಮಾಣ ಕಾಮಗಾರಿಗಳಿಗೆ ಭೂಮಿಪೂಜೆಯನ್ನು ನೆರವೇರಿಸಿ ಮಾತನಾಡಿದ ಅವರು, ಕಳೆದ ಎಂಟು ವರ್ಷಗಳಲ್ಲಿ ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸುತ್ತ ಪುಟ್ಟ ಮಕ್ಕಳಿಂದ ವಯೋವೃದ್ಧರವರೆಗೂ ಮೋದಿಯವರು ಇಷ್ಟಪಡುವ ಶ್ರೇಷ್ಟ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಕೋವಿಡ್ ಹಾಗೂ ಅತಿವೃಷ್ಠಿಯ ಸಂಕಷ್ಟಗಳನ್ನು ಸಮರ್ಥವಾಗಿ ನಿಭಾಯಿಸುತ್ತ ಕ್ಷೇತ್ರದ ಅಭಿವೃದ್ಧಿಗೆ ಸಾವಿರಾರು ಕೋಟಿ ಅನುದಾನವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಿಡುಗಡೆ ಮಾಡಿದ್ದು ಸಾಮಾನ್ಯ ವಿಷಯವಲ್ಲ. ಆದರೆ, ವಿಪಕ್ಷಗಳು ಮಾತ್ರ ಬಿಜೆಪಿ ಸರ್ಕಾರಗಳ ಸಾಧನೆಗಳನ್ನು ಸಹಿಸಲಾರದೇ ಆರೋಪಗಳ ಸುರಿಮಳೆ ಮಾಡುತ್ತಿರುವುದು ಹಾಸ್ಯಾಸ್ಪದ ಎಂದು ಹೇಳಿದರು.
ಹೆಡಿಗ್ಗೊಂಡ ಗ್ರಾಪಂ ಅಧ್ಯಕ್ಷ ಸಹದೇವಪ್ಪ ಬನ್ನಿಹಳ್ಳಿ, ಸದಸ್ಯರಾದ ಮಂಜಪ್ಪ ಮುದಿಯಮ್ಮನವರ, ಶಿವಯೋಗಿ ಶಿಡೇನೂರ, ಈರಣ್ಣ ಅಗಸಿಬಾಗಿಲ, ಕುಮ್ಮೂರ ಗ್ರಾಪಂ ಸದಸ್ಯರಾದ ಮಾರುತಿ ಕಾಳಪ್ಪನವರ, ಚಂದ್ರಕಲಾ ತಳವಾರ, ಮುಖಂಡರಾದ ಗಣೇಶಪ್ಪ ತುಮರಿಕೊಪ್ಪ, ಮಾರುತಿ ಫಾಸಿ, ಇಂಜನೀಯರ್’ಗಳಾದ ಪ್ರಹ್ಲಾದ್, ಸಂತೋಷ, ವಿನಯ್, ಪಿಡಿಓಗಳಾದ ಚನ್ನವೀರೇಶ್ ರೂಢಗಿ, ಗದಿಗೆಪ್ಪ ಕೊಪ್ಪದ, ಕಾರ್ಯದರ್ಶಿ ಜಗದೀಶ ಮಣ್ಣಮ್ಮನವರ, ಗುತ್ತಿಗೆದಾರ ಲಕ್ಷ್ಮೀನಾರಾಯಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.