
ಮೈಸೂರು: ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸುವ ಜತೆಗೆ ಗುಣಮಟ್ಟದಿಂದ ಕೂಡಿರುವಂತೆ ನೋಡಿಕೊಳ್ಳಬೇಕು ಎಂದು ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್.ಶ್ರೀವತ್ಸ ಸೂಚಿಸಿದರು. ಕ್ಷೇತ್ರದ ವ್ಯಾಪ್ತಿಗೆ ಬರುವ ವಾರ್ಡ್ ನಂ.೪೯ರ ಲಕ್ಷ್ಮೀಪುರಂ, ಚಾಮರಾಜಪುರಂ ಟೆನ್ನಿಸ್ ಕೋರ್ಟ್ ಮುಂಭಾಗದಿಂದ ಬಲ್ಲಾಳ್ ಸರ್ಕಲ್ ಸೇರುವ ನರಸರಾಜ ಮಾರ್ಗದ ರಸ್ತೆ ಕಾಮಗಾರಿಯನ್ನು ಪರಿಶೀಲಿಸಿದರು. ಕಾಮಗಾರಿ ಆರಂಭಿಸಿ ಮೂರು ತಿಂಗಳು ಕಳೆದರೂ ಹಾಗೆಯೇ ಬಿಟ್ಟಿರುವುದರಿಂದ ಓಡಾಡಲು ತೊಂದರೆಯಾಗಿದೆ.
ಜಲ್ಲಿಕಲ್ಲುಗಳನ್ನು ಹಾಕಿ ಸುಮ್ಮನೆ ಬಿಟ್ಟಿರುವ ಕಾರಣ ವಾಹನಗಳು ಓಡಾಡಲು ಸಮಸ್ಯೆಯಾಗಿದೆ. ತಕ್ಷಣವೇ ಕಾಮಗಾರಿಯನ್ನುಮುಗಿಸಬೇಕು ಎಂದು ಹೇಳಿದರು. ಕಾಮಗಾರಿ ಮಾಡುವಾಗ ಯಾವುದೇ ಕಳಪೆ ಇಲ್ಲದೆ ಗುಣಮಟ್ಟದಿಂದ ಇರಬೇಕು ಎಂದು ಸಲಹೆ ನೀಡಿದರು.
ನಗರಪಾಲಿಕೆ ನಾಮ ನಿರ್ದೇಶಿತ ಮಾಜಿ ಸದಸ್ಯರಾದ ಕೆ.ಜೆ.ರಮೇಶ್,ಪಿ.ಟಿ.ಕೃಷ್ಣ, ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಜಯಶಂಕರ್, ಮೈಸೂರು ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ.ಸೋಮಸುಂದರ್,ಮಾಧ್ಯಮ ಸಹ ಸಂಚಾಲಕ ಪ್ರದೀಪ್ ಕುಮಾರ್ ಹಾಜರಿದ್ದರು.