(ಸಂಜೆವಾಣಿ ವಾರ್ತೆ)
ಲಕ್ಷ್ಮೇಶ್ವರ,ಅ31 : ಲಕ್ಷ್ಮೇಶ್ವರ ಗೋಜನೂರು ಮಧ್ಯ ಕೈಗೊಂಡಿರುವ ಲೋಕೋಪಿಗೆ ಇಲಾಖೆಯ ರಸ್ತೆ ನಿರ್ಮಾಣ ಕಾಮಗಾರಿಯಿಂದಾಗಿ ರಸ್ತೆಯ ಅಕ್ಕ ಪಕ್ಕದ ರೈತರು ಬೆಳೆದು ನಿಂತ ಬೆಳೆಗಳು ಧೂಳು ತಿನ್ನುತ್ತಿದ್ದು ರೈತರ ಗೋಳು ಕೇಳುವವರೇ ಇಲ್ಲದಂತಾಗಿದೆ.
ಕಳೆದ ಅನೇಕ ತಿಂಗಳಿನಿಂದ ಕುಂಟುತ್ತ ಸಾಗಿರುವ ರಸ್ತೆಯ ಕಾಮಗಾರಿಯಿಂದಾಗಿ ರೈತರು ಬರದ ಸಂಕಷ್ಟದಲ್ಲಿ ಸಿಲುಕಿ ಗೋಳಿಡುತ್ತಿರುವಾಗ ಉಳಿದಿರುವ ಅಲ್ಪಸ್ವಲ್ಪ ಬೆಳೆಗಳು ಸಹ ಧೂಳಿನ ಮಜ್ಜಮದಿಂದಾಗಿ ಹಾಳಾಗುತ್ತಿವೆ. ರಸ್ತೆಯ ಪಕ್ಕದಲ್ಲಿರುವ ಹತ್ತಿ ಬೆಳೆಗೆ ಭಾರಿ ನಷ್ಟ ಉಂಟಾಗುತ್ತಿದ್ದು ಬಿಳಿಯ ಹತ್ತಿಗೆ ಧೂಳು ತುಂಬಿಕೊಂಡು ಹತ್ತಿ ಎಲ್ಲಿದೆ ಎಂದು ಹುಡುಕೋ ಸ್ಥಿತಿಯಲ್ಲಿದೆ. ಗಿಡಗಳು ಸಹ ಧೂಳ್ ಮಯವಾಗಿದ್ದು ರೈತರ ಸಹನೆಯನ್ನು ಕೆಣಕುತ್ತಿದೆ. ಅದೇ ರೀತಿ ಶೇಂಗಾ ಬೆಳೆಯು ಸಹ ಸಂಪೂರ್ಣ ಧೂಳಿನಿಂದ ಆವೃತ್ತವಾಗಿದ್ದು ರೈತರು ಯಾತನೆಯನ್ನು ಅನುಭವಿಸುತ್ತಿದ್ದಾರೆ.
ಕಾಮಗಾರಿ ಪೂರ್ಣಗೊಳ್ಳುವವರೆಗೆ ಅಗೆದ ರಸ್ತೆಗಳಿಗೆ ಧೂಳು ನಿಯಂತ್ರಣಕ್ಕಾಗಿ ಸತತ ನೀರು ಸಿಂಪಡಿಸಬೇಕು ಎಂದು ರೈತರಾದ ಚೇತನ ಕಣವಿ, ಚಂದ್ರಗೌಡ ದೊಡ್ಡಗೌಡರ, ಸುರೇಶ ದನದಮನಿ, ಶೇಖಪ್ಪ ಮರೂಡಿ, ಭರಮಗೌಡ ಪಾಟೀಲ್, ಮುದುಕನಗೌಡ ಪಾಟೀಲ್ ಒತ್ತಾಯಿಸಿದ್ದಾರೆ.