ರಸ್ತೆ ಕಾಮಗಾರಿ ತ್ವರಿತಕ್ಕೆ ಗೌರವ್ ಗುಪ್ತಾ ಸೂಚನೆ


ಬೆಂಗಳೂರು, ನ.೧೭- ರಾಜಧಾನಿ ಬೆಂಗಳೂರು ವ್ಯಾಪ್ತಿಯ ಪ್ರಮುಖ ರಸ್ತೆಗಳ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ, ಸಂಚಾರ ದಟ್ಟಣೆ ಆಗದಂತೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತ ತಾಕೀತು ಮಾಡಿದರು.
ನಗರದಲ್ಲಿಂದು ಬಿಬಿಎಂಪಿಯ ಪ್ರಮುಖ ಆರ್ಟೀರಿಯಲ್ ರಸ್ತೆಗಳ ತಪಾಸಣೆ ಕೈಗೊಳ್ಳುವ ದೃಷ್ಠಿಯಿಂದ ಹೊರವರ್ತುಲ ರಸ್ತೆ (ನಾಯಂಡಹಳ್ಳಿ ಇಂದ ಗೊರಗುಂಟೆಪಾಳ್ಯ ಮುಖೇನ ಕೆ.ಆರ್ ಪುರಂ ವರೆಗೆ) ಮತ್ತು ವೈಟ್‌ಪೀಲ್ಡ್, ಇ.ಪಿ.ಐ.ಪಿ ರಸ್ತೆಗಳ ತಪಾಸಣೆ ನಡೆಸಿದ ಬಳಿಕ ಅವರು ಮಾತನಾಡಿದರು.
ಗೊರಗುಂಟೆ ಪಾಳ್ಯ, ಬಿ.ಇ.ಎಲ್. ವೃತ್ತ, ಹೆಬ್ಬಾಳ ಮೇಲು ಸೇತುವೆ ಕೆ.ಆರ್.ಪುರದ ಮೂಲಕ ವೈಟ್‌ಫೀಲ್ಡ್ ರಸ್ತೆ, ಇ.ಪಿ.ಐ.ಪಿ ರಸ್ತೆಗಳನ್ನು ತಪಾಸಣೆ ನಡೆಸಿ, ಹಳೇ ಮದ್ರಾಸ್ ರಸ್ತೆಯ ಮುಖೇನ ರಸ್ತೆ ಅಭಿವೃದ್ದಿಯನ್ನು ಪರಿವೀಕ್ಷಣೆ ನಡೆಸಿ ನಗರದ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಸುಲಭವಾಗಿ ಸಂಚರಿಸಲು ಇರುವಂತಹ ಹೊರವರ್ತುಲ ರಸ್ತೆ ಮತ್ತು ಆರ್ಟೀರಿಯಲ್ ರಸ್ತೆಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲು ಅಧಿಕಾರಿಗಳಿಗೆ ಈ ಸಮಯದಲ್ಲಿ ಸೂಚನೆ ನೀಡಿದರು.
ನಾಯಂಡಹಳ್ಳಿ ಜಂಕ್ಷನ್‌ನಲ್ಲಿ ಮಳೆಯಿಂದಾಗಿ ಪದೇ ಪದೇ ರಸ್ತೆಮೇಲೆ ನೀರು ನಿಂತು ರಸ್ತೆಯ ಮೇಲ್ಪದರ ಹಾಳಾಗುತ್ತಿದ್ದ ಹಿನ್ನೆಲೆಯಲ್ಲಿ ಸದರಿ ಜಂಕ್ಷನ್‌ನಲ್ಲಿ ಟಿಇಸಿ ವಿಭಾಗದಿಂದ ವೈಟ್ ಟಾಪಿಂಗ್ ಅಳವಡಿಸಲಾಗುತ್ತಿದೆ. ಇದರಿಂದಾಗಿ ಈ ಭಾಗದಲ್ಲಿ ರಸ್ತೆಗುಂಡಿಗಳ ಸಮಸ್ಯೆ ಪರಿಹಾರವಾಗುತ್ತದೆ. ವೈಟ್ ಟಾಪಿಂಗ್ ಅಳವಡಿಸುವ ಕಾಮಗಾರಿಯನ್ನು ೩೦ ದಿನಗಳಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಅದೇ ರೀತಿ, ರಸ್ತೆಯಲ್ಲಿ ವೈಟ್ ಟಾಪಿಂಗ್ ಯೋಜನೆಯನ್ನು ಕೈಗೊಂಡಿದ್ದು ಲಗ್ಗೆರೆ ಬಳಿ ಪ್ರಗತಿಯಲ್ಲಿರುವ ಕಾಮಗಾರಿಯನ್ನು ಪರಿಶೀಲಿಸಿ ರಸ್ತೆಗೆ ವೈಟ್ ಟಾಪಿಂಗ್ ಅಳವಡಿಸುವ ಜೊತೆಗೆ ಚರಂಡಿ ಮತ್ತು ಪಾದಚಾರಿ ಮಾರ್ಗ ಅಭಿವೃದ್ಧಿಯನ್ನು ಸಹ ಏಕ ಕಾಲದಲ್ಲಿ ಕೈಗೊಂಡು ಪೂರ್ಣಗೊಳಿಸಲು ಹೇಳಿದರು.
ಹೊರವರ್ತುಲ ರಸ್ತೆಯಲ್ಲಿ ಮಾತ್ರ ವೈಟ್ ಟಾಪಿಂಗ್ ಕೈಗೊಂಡಿದ್ದು, ಸರ್ವೀಸ್ ರಸ್ತೆಯ ಡಾಂಬರೀಕರಣ ಮತ್ತು ಪಾದಚಾರಿ ಮಾರ್ಗ ಅಭಿವೃದ್ಧಿಯನ್ನು ಇನ್ನೂ ಕೈಗೊಳ್ಳದೇ ಇರುವುದನ್ನು ಗಮನಿಸಿದ ಆಡಳಿತಗಾರರು, ಕೂಡಲೇ ಸರ್ವೀಸ್ ರಸ್ತೆಯ ಡಾಂಬರೀಕರಣವನ್ನು ಕೈಗೊಂಡು ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಡಾ.ರಾಜ್‌ಕುಮಾರ್ ಸಮಾಧಿ ಬಳಿಯ ಮೇಲು ಸೇತುವೆ ಬಳಿ ಸಾಕಷ್ಟು ರಸ್ತೆ ಗುಂಡಿಗಳಿದ್ದು, ಇವುಗಳನ್ನು ದುರಸ್ಥಿಪಡಿಸಲು ಹಾಗೂ ಗೊರಗುಂಟೆಪಾಳ್ಯದ ಜಂಕ್ಷನ್‌ನಲ್ಲಿ ರಸ್ತೆಯ ಮೇಲ್ಪದರ ಸಾಕಷ್ಟು ಹಾಳಾಗಿದ್ದು, ಕೂಡಲೇ ಸರಿಪಡಿಸಬೇಕೆಂದರು. ಇದೇ ಸಮಯದಲ್ಲಿ ಬಾಬುಸಪಾಳ್ಯ ಮೇಲುಸೇತುವೆ ಮತ್ತು ಹೊರಮಾವು ಕೆಳಸೇತುವೆಯಲ್ಲಿ ವೈಟ್‌ಟಾಪಿಂಗ್ ಮಾಡಲು ಪ್ರಾರಂಭಿಸುತ್ತಿದ್ದು, ಕಾಮಗಾರಿಯ ವೇಳಾಪಟ್ಟಿಯಂತೆ ಪೂರ್ಣಗೊಳಿಸಲು ಸೂಚಿಸಿದರು. ಸಾರ್ವಜನಿಕರ ವಾಹನ ಸಂಚಾರಕ್ಕೆ ಉತ್ತಮ ಮಟ್ಟದ ಬದಲೀ ರಸ್ತೆಯ ವ್ಯವಸ್ಥೆಯನ್ನು ವಾಹನ ಸಂಚಾರಕ್ಕೆ ಒದಗಿಸಲು ಸೂಚಿಸಿದರು.
ಈ ಸಂದರ್ಭದಲ್ಲಿ ಇಂಜಿನಿಯರ್ ವಿಭಾಗದ ಮುಖ್ಯಸ್ಥ ಎಂ.ಆರ್.ವೆಂಕಟೇಶ್, ರಸ್ತೆ ಮೂಲಭೂತಸೌಕರ್ಯ ವಿಭಾಗದ ಮುಖ್ಯ ಅಭಿಯಂತರ ಬಿ.ಎಸ್ ಪ್ರಹ್ಲಾದ್, ಯೋಜನಾ ವಿಭಾಗದ ಮುಖ್ಯ ಅಭಿಯಂತರ ಎನ್.ರಮೇಶ್, ಮಹದೇವಪುರ ವಲಯದ ಮುಖ್ಯ ಅಭಿಯಂತರ ಪರಮೇಶ್ವರಯ್ಯ, ಅಧೀಕ್ಷಕ ಅಭಿಯಂತರ ಲೊಕೇಶ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.