ರಸ್ತೆ, ಒಳ ಚರಂಡಿ ಕಾಮಗಾರಿ ಕಳಪೆ : ಸ್ಥಳದಲ್ಲಿಯೇ ಅಧಿಕಾರಿಗಳಿಗೆ ತರಾಟೆ

ಸಕ್ರಿಯೆಗೊಂಡ ಚುನಾಯಿತ ನಗರಸಭೆ ಸಮಿತಿ : ಎಲ್‌ಬಿಎಸ್ – ಹರಿಹರ, ಗದ್ವಾಲ್ ರಸ್ತೆ ಭೇಟಿ
ರಾಯಚೂರು.ನ.11- ನಗರದಲ್ಲಿ ಇತ್ತೀಚಿಗೆ ಆರಂಭಗೊಂಡ ರಸ್ತೆ ಮತ್ತು ಯುಜಿಡಿ ಕಾಮಗಾರಿಗಳಿಗೆ ಭೇಟಿ ನೀಡಿ, ಪರಿಶೀಲಿಸಿದ ನಗರಸಭೆ ಉಪಾಧ್ಯಕ್ಷರು ಮತ್ತು ಸದಸ್ಯರ ತಂಡ ಕಳಪೆ ಕಾಮಗಾರಿಗೆ ಸಂಬಂಧಿಸಿ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಸಂಬಂಧಪಟ್ಟ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನಂತರ ನಗರಸಭೆ ಚುನಾಯಿತ ಸಮಿತಿ ಸಕ್ರಿಯಗೊಂಡು ನಗರದಲ್ಲಿ ವಿವಿಧ ಕಾಮಗಾರಿಗಳಿಗೆ ಭೇಟಿ ನೀಡಿ, ಪರಿಶೀಲಿಸಿತು. ಉಪಾಧ್ಯಕ್ಷ ಅವರ ನೇತೃತ್ವದಲ್ಲಿ ಇಂದು ನಗರದ ಎಲ್‌ಬಿಎಸ್ ನಗರ ರಸ್ತೆ, ಹರಿಹರ ರಸ್ತೆ ಕಾಮಗಾರಿ ಪರಿಶೀಲಿಸಿದರು. ಎಲ್‌ಬಿಎಸ್ ನಗರ, ಪೊಲೀಸ್ ಕಲ್ಯಾಣ ಮಂಟಪ ಮುಂಭಾಗದಲ್ಲಿ ಕೈಗೊಂಡ ರಸ್ತೆ ಡಾಂಬರೀಕರಣ ಕಾಮಗಾರಿ ಅತ್ಯಂತ ಕಳಪೆ ಗುಣಮಟ್ಟದಿಂದ ಕೂಡಿದೆಂದು ಲೋಕೋಪಯೋಗಿ ಇಲಾಖೆ ಅಭಿಯಂತರರನ್ನು ತರಾಟೆಗೆ ತೆಗೆದುಕೊಳ್ಳಲಾಯಿತು.
ಉದ್ದೇಶಿತ ಕಾಮಗಾರಿ ಪೂರ್ಣ ಪ್ರಮಾಣದಲ್ಲಿ ಕೈಗೊಳ್ಳದೇ, ಕೇವಲ ತೋರಿಕೆಗೆ ರಸ್ತೆ ಕಾಮಗಾರಿ ಕೈಗೊಳ್ಳಲಾಗಿದೆಂದು ಬೇಸರ ವ್ಯಕ್ತಪಡಿಸಿದರು. ಗುಣಮಟ್ಟದಿಂದ ಕಾಮಗಾರಿ ಕೈಗೊಳ್ಳಲಿದ್ದರೇ, ತೀವ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆಂದು ಉಪಾಧ್ಯಕ್ಷರು ಮತ್ತು ಸದಸ್ಯರು ಎಚ್ಚರಿಸಿದರು. ಕೋಟ್ಯಾಂತರ ರೂ. ಹಣದ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು ಹಾಗೂ ಸಾರ್ವಜನಿಕರಿಗೆ ಉಪಯುಕ್ತವಾಗಿರಬೇಕೆಂದು ತಾಕೀತು ಮಾಡಿದರು.
ನಂತರ ಗದ್ವಾಲ್ ರಸ್ತೆಗೆ ಭೇಟಿ ನೀಡಿ, 2.4 ಕಿ.ಮೀ. 3 ಕೋಟಿ ಕಾಮಗಾರಿ ಬಗ್ಗೆ ಪರಿಶೀಲಿಸಲಾಯಿತು. ಈ ಕಾಮಗಾರಿ ಕೈಗೊಳ್ಳುವ ಪೂರ್ವ ಚರಂಡಿ ನಿರ್ಮಾಣಕ್ಕೆ ಆದ್ಯತೆ ನೀಡದಿರುವುದು ಆಕ್ಷೇಪಣೆಗೆ ಕಾರಣವಾಯಿತು. ಅಧಿಕಾರಿಗಳು ಕೇವಲ ಶಾಸಕರು ಹೇಳಿದಂತೆ ಮಾಡುವುದಲ್ಲ. ಸ್ಥಳದಲ್ಲಿ ಅಗತ್ಯತೆಗೆ ಅನುಗುಣವಾಗಿ ಕಾಮಗಾರಿ ಕೈಗೊಳ್ಳಬೇಕೆಂದು ಸೂಚಿಸಿದರು.
ಹರಿಹರ ರಸ್ತೆ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ ಕೈಗೊಂಡ ಯುಜಿಡಿ ಕಾಮಗಾರಿಗೆ ಸಂಬಂಧಿಸಿ, ಪರಿಶೀಲಿಸಿದ ನಗರಸಭೆ ತಂಡ ಯುಜಿಡಿ ಕಾಮಗಾರಿ ಕೈಗೊಂಡ ರಸ್ತೆಗಳಲ್ಲಿ ತಕ್ಷಣವೇ ಡಾಂಬರೀಕರಣ ಮಾಡಬೇಕೆಂಬ ನಿಯಮವಿದ್ದರೂ, ಇದನ್ನು ಅನುಷ್ಠಾನಗೊಳಿಸಿದಿರುವುದಕ್ಕೆ ಅಧಿಕಾರಿಯನ್ನು ಭಾರೀ ತರಾಟೆಗೆ ತೆಗೆದಕೊಂಡರು.
ರಸ್ತೆ, ಯುಜಿಡಿ, ಚರಂಡಿ ಕಾಮಗಾರಿಗಳಿಗೆ ಸಾರ್ವಜನಿಕರ ಅನುಕೂಲಕ್ಕಿರಬೇಕೇ ಹೊರತೂ, ಜನರ ತೊಂದರೆಗಲ್ಲವೆಂದು ಅಧಿಕಾರಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ತಂಡ, ಕಾಮಗಾರಿಗಳನ್ನು ಅತ್ಯಂತ ಗುಣಮಟ್ಟದಿಂದ ನಿರ್ವಹಿಸಬೇಕು ಎಂದು ತಾಕೀತು ಮಾಡಲಾಯಿತು. ಮಾಡಗಿರಿ ನರಸಿಂಹಲು ಅವರು, ರಸ್ತೆ ಮತ್ತು ಒಳ ಚರಂಡಿಯ ಕಾಮಗಾರಿ ಗುಣಮಟ್ಟದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಪೊಲೀಸ್ ಕಾಲೋನಿ ಕಲ್ಯಾಣ ಮಂಟಪದ ಮುಂಭಾಗದ ರಸ್ತೆ ನಿರ್ಮಾಣ ಕೇವಲ ತೋರಿಕೆಗೆ ಮಾಡಿದಂತಿದೆ. ಅಲ್ಲಿ ಸ್ಥಳೀಯ ಜನರೆ ಈ ಕಾಮಗಾರಿಗೆ ಸಂಬಂಧಿಸಿ, ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಸ್ಥಳೀಯ ವಾರ್ಡ್ ನಗರಸಭೆ ಸದಸ್ಯರನ್ನು ಕಡೆಗಣಿಸಿ, ಕಾಮಗಾರಿ ಕಡೆಗಣಿಸಲಾಗುತ್ತಿದೆ. ಶಿಷ್ಟಾಚಾರದನ್ವಯ ಸ್ಥಳೀಯ ನಗರಸಭೆ ಸದಸ್ಯರಿಗೆ ಮಾಹಿತಿ ನೀಡದೇ, ಕಾಮಗಾರಿ ಆರಂಭಿಸಲಾಗಿದೆ. ಈಗ ಗುಣಮಟ್ಟದ ಕಾಮಗಾರಿ ಕೈಗೊಳ್ಳದೇ, ಕೇವಲ ಬಿಲ್ ಎತ್ತುವಳಿ ಉದ್ದೇಶದಿಂದ ಈ ಕಾಮಗಾರಿ ನಡೆಸಲಾಗುತ್ತಿದೆಂದು ನೇರವಾಗಿ ಆರಂಭಿಸಿದರು.
ಗದ್ವಾಲ್ ರಸ್ತೆ ಕಾಮಗಾರಿಯೂ ಇದೇ ರೀತಿಯಲ್ಲಿದೆ. ಅಕ್ಕಪಕ್ಕದಲ್ಲಿ ಚರಂಡಿ ನಿರ್ಮಿಸದ ಕಾರಣ ರಸ್ತೆಗೆ ಮಳೆ ನೀರು ನುಗ್ಗುವುರಿಂದ ರಸ್ತೆ ಕಿತ್ತು ಹೋಗುತ್ತದೆ. ಈ ಬಗ್ಗೆ ಅಧಿಕಾರಿಗಳು ಎಚ್ಚರ ವಹಿಸದೇ, ಅಧಿಕಾರಿಗಳು ಬೇಕಾಬಿಟ್ಟಿ ಕಾಮಗಾರಿ ಕೈಗೊಳ್ಳುತ್ತಿದ್ದಾರೆಂದು ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳಲಾಯಿತು. ಕಾಂಗ್ರೆಸ್ ಯುವ ಮುಖಂಡ ರವಿ ಬೋಸರಾಜು ಅವರು ಈ ಕಾಮಗಾರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ನೂರಾರು ಕೋಟಿ ರೂ. ಅನುದಾನ ಬಿಡುಗಡೆಗೊಂಡಿದೆಂದು ಶಾಸಕ ಡಾ.ಶಿವರಾಜ ಪಾಟೀಲ್ ಅವರು ಹೇಳುತ್ತಿದ್ದಾರೆ. ಆದರೆ, ಈ ಅನುದಾನ ಯಾವ ರೀತಿ ಬಳಕೆಯಾಗುತ್ತಿದೆ ಎನ್ನುವುದು ಇಲ್ಲಿ ತಿಳಿಯುತ್ತದೆ. ಕೇವಲ ಬಿಲ್ ಎತ್ತುವ ಉದ್ದೇಶದಿಂದ ಈ ಕಾಮಗಾರಿ ನಡೆಯುತ್ತಿದೆ ಎನ್ನುವುದು ಇಲ್ಲಿ ಸ್ಪಷ್ಟಗೊಳ್ಳುತ್ತದೆ. ಅಧಿಕಾರಿಗಳಿಗೂ ಇಷ್ಟೇ ಬೇಕಾಗಿದೆ. ಕಳಪೆ ಕಾಮಗಾರಿ ಮೂಲಕ ಪರ್ಸೆಂಟೇಜ್ ಪಡೆಯುವ ಮೂಲಕ ಉದ್ದೇಶಕ್ಕೆ ಅಧಿಕಾರಿಗಳು ಸೀಮಿತರಾಗಿದ್ದಾರೆ. ಈ ರೀತಿ ಕಾಮಗಾರಿ ಕೈಗೊಂಡರೇ, ನಗರದ ಅಭಿವೃದ್ಧಿ ಸಾಧ್ಯವೇ ಎಂದು ಪ್ರಶ್ನಿಸಿದರರು.
ಅತಿವೃಷ್ಟಿಯಿಂದ ತೀವ್ರ ತೊಂದರೆಗೆ ಗುರಿಯಾದ ಜನರಿಗೆ ತಕ್ಷಣವೇ ಪರಿಹಾರ ನೀಡುವುದಗಿ ಭರವಸೆ ನೀಡಲಾಗಿತ್ತು. ಆದರೆ, ಇಲ್ಲಿವರೆಗೂ ಕೂಡ ಯಾವುದೇ ಪರಿಹಾರ ನೀಡಿಲ್ಲ. ಎನ್‌ಡಿಆರ್ಎಫ್ ನಿಯಮಗಳನ್ವಯ ವಿಪತ್ತಿನ ಸಂಕಷ್ಟಕ್ಕೆ ಗುರಿಯಾದ ಜನರಿಗೆ ತಲಾ 10 ಸಾವಿರ ರೂ. ತಕ್ಷಣವೇ ನೀಡಬೇಕೆಂಬ ನಿಯಮಗಳಿದ್ದರೂ, ಇಲ್ಲಿವರೆಗೂ ನಯಾ ಬಿಡಿಗಾಸು ಬಿಡುಗಡೆ ಮಾಡಿಲ್ಲವೆಂದ ಅವರು, ಇದೆಂಥಾ ಸರ್ಕಾರ ಅಧಿಕಾರದಲ್ಲಿದೆ.
ಇವರಿಗೆ ಕನಿಷ್ಟ ಮಾನವಿಯತೆ ಇಲ್ಲ. ಬಡವರ ಸಂಕಷ್ಟದ ಅರಿವಿಲ್ಲದೇ ಈ ಸರ್ಕಾರ ಆಡಳಿತ ನಡೆಸುತ್ತಿದೆಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಜಯಣ್ಣ, ಜಿಂದಪ್ಪ, ಸಾಜೀದ್ ಸಮೀರ್, ಬಿ.ರಮೇಶ, ತಿಮ್ಮಾರೆಡ್ಡಿ, ಹರಿಬಾಬು, ವಾಹೀದ್, ಸುನೀಲ್, ತಿಮ್ಮಪ್ಪ ನಾಯಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.