ರಸ್ತೆ ಉಬ್ಬು ನಿರ್ಮಾಣಕ್ಕೆ ಆಗ್ರಹ

(ಸಂಜೆವಾಣಿ ವಾರ್ತೆ)
ಲಕ್ಷ್ಮೇಶ್ವರ,ಜು16: ಲಕ್ಷ್ಮೇಶ್ವರ ಮತ್ತು ಹರದ ಗಟ್ಟಿ ಮಧ್ಯದ ರಸ್ತೆ ನಿರ್ಮಾಣವಾಗಿ ರಸ್ತೆಯ ಎರಡು ಕಡೆ ತಿರುವು ಇರುವುದರಿಂದ ಅನೇಕ ಅಪಘಾತಗಳು ಸಂಭವಿಸಿ ಸವಾರರು ಗಾಯಗೊಂಡ ಘಟನೆ ಜರುಗಿದ್ದವು.
ಈ ಹಿನ್ನಲೆಯಲ್ಲಿ ಸಾರ್ವಜನಿಕರ ಒತ್ತಾಯದಿಂದ ಶಾಸಕ ಚಂದ್ರು ಲಮಾಣಿಯವರು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಗೆ ಅಪಘಾತ ತಡೆಗಟ್ಟಲು ಉಬ್ಬುಗಳನ್ನು ನಿರ್ಮಿಸುವಂತೆ ಸೂಚಿಸಿದ್ದರು.
ಲೋಕೋಪಯೋಗಿ ಇಲಾಖೆಯವರು ಈ ರಸ್ತೆ ಎರಡು ಕಡೆ ವೈಜ್ಞಾನಿಕವಾಗಿ ಉಬ್ಬುಗಳನ್ನು ನಿರ್ಮಿಸಿದರು. ಆದರೆ ಯಾರೋ ಕಿಡಗೇಡಿಗಳು ಇವುಗಳನ್ನು ಕಿತ್ತು ಹಾಕಿದ್ದು ಈಗ ಮತ್ತೆ ಅಪಘಾತಕ್ಕೆ ಕಾರಣವಾಗಿದೆ . ಏಳೆಂಟು ದಿನಗಳ ಹಿಂದೆ ಕಾರೊಂದು ನಿಯಂತ್ರಣ ತಪ್ಪಿತ್ತು, ಆದರೆ ಯಾವುದೇ ಅನಾಹುತ ಸಂಭವಿಸಿರಲಿಲ್ಲ.
ಈಗ ಮತ್ತೆ ಈ ರಸ್ತೆಯ ಮೇಲೆ ಅನಿವಾರ್ಯವಾಗಿ ಉಬ್ಬುಗಳನ್ನು ನಿರ್ಮಿಸುವ ಅವಶ್ಯಕತೆ ಇದೆ. ಡಾಂಬರು ಬಳಸಿ ಇಲ್ಲವೇ ಕಾಂಕ್ರೀಟ್ ಮಾಡಿ ಉಬ್ಬುಗಳನ್ನು ನಿರ್ಮಿಸಿದರೆ ಮಾತ್ರ ಅವುಗಳನ್ನು ಕೀಳಲು ಸಾಧ್ಯವಿಲ್ಲ. ಆದ್ದರಿಂದ ಲೋಕೋಪಯೋಗಿ ಇಲಾಖೆಯವರು ಈ ರಸ್ತೆಯ ಕಡೆಗೆ ಉಬ್ಬುಗಳನ್ನು ನಿರ್ಮಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.