ರಸ್ತೆ ಅಭಿವೃದ್ಧಿ ವಿಳಂಬ ಖಂಡಿಸಿ ಪ್ರತಿಭಟನೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ ಜು 26 : ರಸ್ತೆ ಕಾಮಗಾರಿ ವಿಳಂಬ ಖಂಡಿಸಿ ನಗರದ ಬಾಲಾಜಿ ರಸ್ತೆಯಲ್ಲಿ ಜನತೆ ಇಂದು ಟೈರ್ ಗಳಿಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ರಸ್ತೆ ಸಂಪೂರ್ಣ ಹಾಳಾಗಿದ್ದು ಹೊಸದಾಗಿ ಮಾಡುತ್ತಿರುವ ರಸ್ತೆ ಕೂಡಾ ಅರ್ಧಕ್ಕೆ ನಿಂತಿರುವುದರಿಂದ ನಾಗರೀಕರು ಓಡಾಡುವುದೇ ಕಷ್ಟಕರವಾಗಿದ್ದ ಪಾಲಿಕೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ವಡ್ಡರಬಂಡೆಯ ಸಾರ್ವಜನಿಕರು ರಸ್ತೆಗಿಳಿದು ಪ್ರತಿಭಟನೆ ನಡೆಸಿದರು.
ರಸ್ತೆ ದುರಸ್ಥಿ ಪೂರ್ಣಗೊಳ್ಳದೆ ಪ್ರತಿನಿತ್ಯ ಏಳುವ ಧೂಳಿನಿಂದ, ಮಳೆ ಬಂದರೆ ಕೊಚ್ಚೆಯಾಗುವ ರಸ್ತೆಯಿಂದ ಜನರು ಕಂಗಾಲಾಗಿ ಹೋಗಿದ್ದಾರೆ. ಸ್ಥಳೀಯ ವಾರ್ಡ್ ಕಾರ್ಪೋರೇಟರ್ ಸೇರಿದಂತೆ ಪಾಲಿಕೆಯ ಅಧಿಕಾರಿಗಳ ಗಮನಕ್ಕೆ ತಂದರೂ ಕೂಡ ಯಾವುದೇ ಪ್ರಯೋಜನೆ ಆಗಿಲ್ಲ. ದಿನನಿತ್ಯ ಈ ರಸ್ತೆಯಲ್ಲಿ ಸಂಚರಿಸುವುದೇ ಜನರಿಗೆ ದೊಡ್ಡ ತಲೆ ನೋವಾಗಿದೆಂದರು.
ಸಾರ್ವಜನಿಕರ ಧಿಡೀರ್ ಪ್ರತಿಭಟನೆಯಿಂದ ರಸ್ತೆ ಸಂಚಾರ ಸ್ಥಗಿತಗೊಂಡು ವಾಹನ ಸವಾರರು ಪರದಾಡಬೇಕಾಯಿತು. ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಸ್ಥಳಕ್ಕೆ ಬಂದು ಹಾಳಾಗಿರುವ ರಸ್ತೆಯನ್ನು ರಿಪೇರಿ ಮಾಡಬೇಕು ಮತ್ತು ಹೊಸದಾಗಿ ನಿರ್ಮಿಸುತ್ತಿರುವ ರಸ್ತೆಯನ್ನು ಉತ್ತಮ ಗುಣಮಟ್ಟದೊಂದಿಗೆ ನಿರ್ಮಿಸಬೇಕೆಂದು ಆಗ್ರಹಿಸಿದರು. .